ಚಿತ್ರದುರ್ಗ| ರುಡ್‌ಸೆಟ್ ಪಕ್ಕದಲ್ಲಿ ನಿರ್ಮಿಸಿರುವ ನೂತನ ಪಾರ್ಕ್ ಉದ್ಘಾಟನೆ

ಹೊಸ ದಿಗಂತ ವರದಿ, ಚಿತ್ರದುರ್ಗ:

ನಗರದ ಎಲ್ಲಾ ಪಾರ್ಕ್‌ಗಳನ್ನು ಹಂತ ಹಂತವಾಗಿ ಅಭಿವೃದ್ಧಿ ಮಾಡುತ್ತಿದ್ದು, ಸಾರ್ವಜನಿಕರು ಉತ್ತಮವಾಗಿ ಬಳಸಿಕೊಂಡು ಸ್ವಚ್ಛತೆ ಕಾಪಡಿಕೊಳ್ಳಬೇಕು ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.
ನಗರದ ರುಡ್‌ಸೆಟ್ ಪಕ್ಕದಲ್ಲಿ ನಿರ್ಮಿಸಿರುವ ನೂತನ ಪಾರ್ಕ್ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಜನರು ತಮ್ಮ ಸಂಜೆಯ ಸಮಯ ಮತ್ತು ಉತ್ತಮ ಗಾಳಿಗಾಗಿ ಪಾರ್ಕ್‌ಗಳ ಮೊರೆ ಹೋಗಿತ್ತಿದ್ದಾರೆ. ನಗರದಲ್ಲಿ ಪಾರ್ಕ್ ಅಭಿವೃದ್ಧಿ ಮಾಡಲಾಗುತ್ತಿದ್ದು, ಕೋವಿಡ್‌ನಿಂದ ಸ್ವಲ್ಪ ನಿಧಾನವಾಗಿದೆ. ಜನರಿಗೆ ಉತ್ತಮ ಮನೆಯಂತೆ ಸುತ್ತಮುತ್ತಲಿನ ಪರಿಸರ ಬೆಳೆಸುವುದು ಅಷ್ಟೆ ಮುಖ್ಯವಾಗಿದೆ ಎಂದರು.
ಮನೆಯಲ್ಲಿ ಬಳಿ ಗಿಡ ಮರಗಳನ್ನು ಬೆಳೆಸಿಕೊಳ್ಳಬೇಕು. ಪಾರ್ಕ್‌ನಿಂದ ಹಿರಿಯ ನಾಗರಿಕರು, ಮಹಿಳೆಯರು, ಯುವಕರು, ಮಕ್ಕಳಿಗೆ ಸೇರಿ ಎಲ್ಲಾರಿಗೂ ಅನುಕೂಲವಾಗುತ್ತದೆ. ಆದರೆ ದಯಮಾಡಿ ಸ್ವಚ್ಛತೆಯನ್ನು ಕಾಪಾಡಬೇಕು. ತಮ್ಮ ಮನೆಯನ್ನು ಯಾವ ರೀತಿ ಸ್ವಚ್ಛತೆಯಿಂದ ಇಟ್ಟಿರುತ್ತಾರೆಯೋ ಅದೇ ರೀತಿಯಲ್ಲಿ ಪಾರ್ಕ್ ಉಪಯೋಗ ಪಡೆಯುವವರು ನೋಡಿಕೊಂಡರೆ ಉತ್ತಮ ವಾತವರಣವಿರುತ್ತದೆ ಎಂದು ತಿಳಿಸಿದರು.
ಜೋಗಿಮಟ್ಟಿ ರಸ್ತೆಯಲ್ಲಿನ ಬನ್ನಿಕಾಳಮ್ಮ ದೇವಸ್ಥಾನದ ಬಳಿಯ ಉದ್ಯಾನವನವನ್ನು ೫ ಲಕ್ಷ ರೂ. ವೆಚ್ಚದಲ್ಲಿ ಉದ್ಯಾನವನ ಮತ್ತು ಜಿಮ್ ಸಹ ಉದ್ಘಾಟಿಸಿದ್ದೇನೆ. ಸುಣ್ಣದ ಗುಮ್ಮಿ ವಿಚಾರವಾಗಿ ಸಾರ್ವಜನಿಕರು ಸ್ಥಳಾಂತರಿಸಲು ಮನವಿ ಮಾಡಿದ್ದಾರೆ. ಆದರೆ ಸ್ಥಳಾಂತರಿಸುವುದು ನನಗೆ ಕಷ್ಟವೇನಲ್ಲ. ಬದಲಿ ಜಾಗದ ಸಮಸ್ಯೆಯಾಗಿದೆ. ಇವರಿಗೆ ಎಲ್ಲಿ ಜಾಗವನ್ನು ನೀಡಬೇಕೆಂದು ತಿಳಿಯುತ್ತಿಲ್ಲ ಎಂದರು.
ನನ್ನ ಕ್ಷೇತ್ರದಲ್ಲಿ ಜಾಗದ ಸಮಸ್ಯೆ ಇದೆ. ಹಣ ನೀಡಿದರು ಸಹಾ ಎಲ್ಲಿಯೂ ಜಾಗ ಸಿಗುತ್ತಿಲ್ಲ. ಮನೆಗಾಗಿ ಸಾವಿರಾರು ಅರ್ಜಿಗಳು ಬಂದಿವೆ. ಅವರಿಗೆ ಮನೆ ನಿರ್ಮಾಣ ಮಾಡಲು ಸಹಾ ಜಾಗದ ಕೊರತೆ ಕಾಡುತ್ತಿದೆ. ಈಗಾಗಲೇ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹಾರ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ದಿನದ 24 ಗಂಟೆ ನೀರು ನೀಡಲಾಗುವುದು. ಪೈಪ್‌ಲೈನ್ ಮೂಲಕ ಗ್ಯಾಸ್ ಸರಬರಾಜು ಮಾಡುವ ಕಾರ್ಯವೂ ಸಹಾ ಭರದಿಂದ ಸಾಗಿದೆ. ಮುಂದಿನ ದಿನಗಳಲ್ಲಿ ನಿಮ್ಮ ಬಡಾವಣೆಗೂ ಸಹಾ ಸಂಪರ್ಕ ನೀಡಲಾಗುವುದು ಎಂದು ಶಾಸಕರು ತಿಳಿಸಿದರು.
ನಗರಾಭಿವೃದ್ದಿ ಪ್ರಾಧಿಕಾರದಿಂದ ಇಲ್ಲಿ ಉತ್ತಮವಾದ ಜಿಮ್ ಸಾಧನಗಳನ್ನು ಅಳವಡಿಕೆ ಮಾಡಲಾಗಿದೆ. ಇದರ ಸದುಪಯೋಗ ಮಾಡಿಕೊಳ್ಳಿ. ಕಸದ ರಾಶಿ ಬೀಳದ ಹಾಗೆ ನೋಡಿಕೊಳಿ. ಮನೆಯಿಂದ ಇಂತಿಷ್ಟು ಹಣವನ್ನು ನೀಡುವ ಮೂಲಕ ಯಾರಿಗಾದರೂ ಕೆಲಸ ನೀಡಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಿ ಎಂದು ಸಲಹೆ ನೀಡಿದರು.
ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಬದರಿನಾಥ್, ಸದಸ್ಯರಾದ ಮಂಜುನಾಥ್, ಓಂಕಾರ್, ಎ.ರೇಖಾ, ಆಯುಕ್ತರಾದ ಸೋಮಶೇಖರ್, ನಗರಸಭೆಯ ಮಾಜಿ ಸದಸ್ಯರಾದ ಮಹೇಶ್, ಇಂಜಿನಿಯರ್ ಕಿರಣ್, ಗುತ್ತಿಗೆದಾರರಾದ ಕುಮಾರ್, ನಾಗರಾಜ್ ಸೇರಿದಂತೆ ಬಡಾವಣೆಯ ಜನತೆ ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!