ಹೊಸ ದಿಗಂತ ವರದಿ, ಚಿತ್ರದುರ್ಗ:
ಜಿಲ್ಲಾಸ್ಪತ್ರೆಯ ಕಾರ್ಯವೈಖರಿಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ.ನಾಗಲಕ್ಷ್ಮೀ ಚೌಧರಿ ಬೇಸರ ವ್ಯಕ್ತಪಡಿಸಿದರು.
ಜಿಲ್ಲಾಸ್ಪತ್ರೆಯ ಸ್ಥಿತಿಗತಿ ಅವಲೋಕನಕ್ಕಾಗಿ ಭೇಟಿ ನೀಡಿದಾಗ ಸಾಕಷ್ಟು ದೂರುಗಳು ಗಮನಕ್ಕೆ ಬಂದಿದ್ದು, ಜಿಲ್ಲಾಸ್ಪತ್ರೆಯ ವ್ಯವಸ್ಥೆಯು ಮನಸ್ಸಿಗೆ ನೋವುಂಟು ಮಾಡಿದೆ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಬಿಸಿ ನೀರು ಇಲ್ಲ, ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಅಳವಡಿಸಿರುವ ಲಿಪ್ಟ್ ವರ್ಕ್ ಆಗುತ್ತಿಲ್ಲ. ಜಿಲ್ಲಾಸ್ಪತ್ರೆಯಿಂದ ನಡೆಯುತ್ತಿರುವ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯಗಳು ಕಲ್ಪಿಸದೇ ಇರುವುದಕ್ಕೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ನರ್ಸಿಂಗ್ ವಿದ್ಯಾರ್ಥಿಗಳನ್ನು ಸಭೆಗೆ ಕರೆಯಿಸಿದ ಆಯೋಗದ ಅಧ್ಯಕ್ಷರು, ಅವರಿಂದ ಅಹವಾಲುಗಳನ್ನು ಆಲಿಸಿದರು, ನರ್ಸಿಂಗ್ ಕಾಲೇಜಿಗೆ ಕೇವಲ ೨ ಕೊಠಡಿ ಕೊಡಲಾಗಿದೆ, ಸೂಕ್ತ ಬೋಧಕರಿಂದ ಬೋಧನೆ ನಮಗೆ ದೊರೆಯುತ್ತಿಲ್ಲ, ಮೂಲಭೂತ ಸೌಕರ್ಯ ಸಿಗುತ್ತಿಲ್ಲ, ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕಲಾಗುತ್ತಿದೆ ಎಂದು ದೂರಿದರು. ಈ ಬಗ್ಗೆ ಖುದ್ದಾಗಿ ಭೇಟಿ ನೀಡಿ, ಸಮಸ್ಯೆ ಪರಿಹರಿಸುವುದಾಗಿ ಜಿಲ್ಲಾಧಿಕಾರಿಗಳು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.
ಸಾಮಾಜಿಕ ಜಾಲತಾಣದ ದುಷ್ಪರಿಣಾಮಗಳ ಬಗ್ಗೆ ಎಚ್ಚರವಿರಲಿ : ಗ್ರಾಮೀಣ ಭಾಗದಿಂದ ನಗರ, ಪಟ್ಟಣಗಳಿಗೆ ಓದಲು ಬರುವ ಹೆಣ್ಣುಮಕ್ಕಳು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿ, ಮೋಸದ ಬಲೆಗೆ ಬೀಳುವ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿದ್ದು, ಹದಿಹರೆಯದ ಹೆಣ್ಣು ಮಕ್ಕಳು, ಸಾಮಾಜಿಕ ಜಾಲತಾಣದ ಬಳಕೆಯಲ್ಲಿ ಸಾಕಷ್ಟು ಎಚ್ಚರ ವಹಿಸಬೇಕು. ಆಸೆ, ಆಮಿಷಗಳಿಗೆ ಒಳಗಾಗಿ, ಮೋಸ ಹೋಗುವಂತಾಗಬಾರದು ಎಂದು ಎಚ್ಚರಿಸಿದರು.
ಹೆಣ್ಣುಮಕ್ಕಳು ತಮ್ಮ ಪೋಷಕರು, ಪಾಲಕರೊಂದಿಗೆ ನಿರಂತರ ಸಂಪರ್ಕವನ್ನು ಇಟ್ಟುಕೊಳ್ಳಬೇಕು. ಯಾವುದೇ ಮೋಸ, ವಂಚನೆ ಅಥವಾ ಬೆದರಿಕೆಯಂತಹ ಪರಿಸ್ಥಿತಿ ಕಂಡುಬಂದಾಗ ಧೈರ್ಯವಾಗಿ ಎದುರಿಸಬೇಕು. ಪೊಲೀಸ್ ಇಲಾಖೆ ಕೂಡ ಈ ಬಗ್ಗೆ ಹೆಚ್ಚಿನ ನಿಗಾ ವಹಿಸಿ, ಹೆಣ್ಣುಮಕ್ಕಳ ರಕ್ಷಣೆಗೆ ಮುಂದಾಗಬೇಕು ಎಂದು ಡಾ. ನಾಗಲಕ್ಷ್ಮಿ ಅವರು ಹೇಳಿದರು.
ಮಹಿಳಾ ಆಯೋಗಕ್ಕೆ ೨ ಸಾವಿರ ಅರ್ಜಿ ಸ್ವೀಕಾರ : ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಕಳೆದ ಒಂದು ವರ್ಷದ ಅವಧಿಯಲ್ಲಿ ಸುಮಾರು ೨ ಸಾವಿರ ಅರ್ಜಿಗಳು ಆಯೋಗಕ್ಕೆ ಬಂದಿವೆ. ಈ ಪೈಕಿ ಈಗಾಗಲೇ ೧,೭೦೦ ಕ್ಕೂ ಹೆಚ್ಚು ಅರ್ಜಿಗಳನ್ನು ಇತ್ಯರ್ಥ ಮಾಡಲಾಗಿದ್ದು, ಇನ್ನೂ ೨೦೦ ಅರ್ಜಿಗಳು ಮಾತ್ರ ಬಾಕಿ ಇವೆ ಎಂದು ಹೇಳಿದರು.
ಮಕ್ಕಳ ರಕ್ಷಣೆ, ಭದ್ರತೆ, ಸ್ಥಿತಿಗತಿಗಳ ಪರಿಶೀಲನೆ ನಡೆಸಿ, ಸಂಬಂಧಪಟ್ಟ ಅಧಿಕಾರಿಗಳು ಪ್ರತಿ ತಿಂಗಳಿಗೊಮ್ಮೆ ವರದಿ ನೀಡಬೇಕು ಎಂದು ತಿಳಿಸಿದ ಅವರು, ಬಾಲ್ಯವಿವಾಹ ಹಾಗೂ ದೌರ್ಜನ್ಯ ತಡೆಗೆ ಮಕ್ಕಳ ಸಹಾಯವಾಣಿ ಸಂಖ್ಯೆ ೧೦೯೮ ಹಾಗೂ ಪೊಲೀಸ್ ತುರ್ತು ಸಹಾಯವಾಣಿ ಸಂಖ್ಯೆ ೧೧೨ ಗೆ ಕರೆ ಮಾಡುವಂತೆ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಇದೇ ಸಂದರ್ಭದಲ್ಲಿ ಮನವಿ ಮಾಡಿದರು.