ಅಭ್ಯರ್ಥಿಯ ಸಾಮರ್ಥ್ಯ ಆಧರಿಸಿ ಮತದಾರರಿಂದ ಆಯ್ಕೆ: ಯದುವೀರ್

ಹೊಸದಿಗಂತ ವರದಿ, ಮಡಿಕೇರಿ:

ಚುನಾವಣೆಯಲ್ಲಿ ಅಭ್ಯರ್ಥಿಯ ಸಾಮರ್ಥ್ಯ ಆಧರಿಸಿ ಮತದಾರರು ಆಯ್ಕೆ ಮಾಡುತ್ತಾರೆ ಎಂದು ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ್ ಒಡೆಯರ್ ತಿಳಿಸಿದ್ದಾರೆ.

ತಲಕಾವೇರಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರ ಆರಂಭಿಸಿದ ಸಂದರ್ಭ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ ಅವರನ್ನು ಅಭಿನಂದಿಸುತ್ತೇನೆ. ಅಭ್ಯರ್ಥಿಯ ಸಾಮರ್ಥ್ಯ ಆಧರಿಸಿ ಜನ ಆಯ್ಕೆ ಮಾಡುತ್ತಾರೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರಚಾರದ ಸಂದರ್ಭ ಜನರಿಂದ ಉತ್ತಮ ಸ್ಪಂದನೆ ಮತ್ತು ಉತ್ಸಾಹ ಕಂಡು ಬರುತ್ತಿದೆ. ಕ್ಷೇತ್ರದ ಸಮಸ್ಯೆಗಳನ್ನು ಪಕ್ಷದ ಪ್ರಮುಖರು ಗಮನಕ್ಕೆ ತಂದಿದ್ದು, ಅದರ ಪರಿಹಾರಕ್ಕೂ ಸಲಹೆ ನೀಡಿದ್ದಾರೆ ಎಂದು ಹೇಳಿದರು.

ಪ್ರಚಾರ ಅಭಿಯಾನಕ್ಕೆ ಹಾಲಿ ಸಂಸದ ಪ್ರತಾಪ್ ಸಿಂಹ ಅವರು ಗೈರಾಗಿರುವ ಕುರಿತು ಪ್ರತಿಕ್ರಿಯಿಸಿದ ಯದುವೀರ್ ಒಡೆಯರ್, ಪ್ರಚಾರ ಅಭಿಯಾನ ನಡೆಸುವಂತೆ ಪಕ್ಷವೇ ಸೂಚನೆ ನೀಡಿದ್ದು, ಅದರಂತೆ ಪ್ರಚಾರ ಆರಂಭಿಸಲಾಗಿದೆ. ಪ್ರತಾಪ್ ಸಿಂಹ ಅವರು ಕೂಡಾ ಎಲ್ಲಾ ಸಹಕಾರ ನೀಡುವುದಾಗಿ ಈಗಾಗಲೇ ಹೇಳಿದ್ದಾರೆ. 10 ವರ್ಷಗಳ ಕಾಲ ಸಂಸದರಾಗಿ ಅವರು ಅಭಿವೃದ್ದಿ ಮಾಡುವ ಮೂಲಕ ಭದ್ರ ಬುನಾದಿ ಹಾಕಿದ್ದಾರೆ ಎಂದು ಹೇಳಿದರು.

ಕಾವೇರಿ ಮಾತೆಯ ಪುಣ್ಯ ಭೂಮಿಯ ಸೇವೆಗೆ ಅವಕಾಶ ದೊರೆತದ್ದು ನನ್ನ ಸೌಭಾಗ್ಯ. ಭಾಗಮಂಡಲ ಹಾಗೂ ತಲಕಾವೇರಿಯಲ್ಲಿ ಪೂಜೆ ಸಲ್ಲಿಸುವ ಮೂಲಕ ಚುನಾವಣಾ ಪ್ರಚಾರ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಅದರೊಂದಿಗೆ ನಾಡಿನಲ್ಲಿ ಉತ್ತಮ ಮಳೆ ಬೆಳೆಯಾಗಲಿ, ನಾಡು ಅಭಿವೃದ್ಧಿಯಾಗಲಿ ಎಂದು ಮಾತೆ ಕಾವೇರಿಯಲ್ಲಿ ಪ್ರಾರ್ಥಿಸಿದ್ದೇನೆ. ಮೈಸೂರು ಜಿಲ್ಲೆ ಕಾವೇರಿ ಮಾತೆಯನ್ನೂ ಆರಾಧಿಸುತ್ತದೆ. ಕಾವೇರಿ ಮಾತೆ ನಮಗೆ ತಾಯಿಯಾಗಿ ಧಾರ್ಮಿಕತೆಯೊಂದಿಗೆ ಆರ್ಥಿಕತೆಯ ನೆಲೆಯನ್ನೂ ನೀಡಿದೆ ಎಂದು ಯದುವೀರ್ ತಿಳಿಸಿದರು.

ಈ ಸಂದರ್ಭ ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಮಾಜಿ ಶಾಸಕ ಕೆ.ಜಿ.ಬೋಪಯ್ಯ, ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ, ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಅಪ್ರು ರವೀಂದ್ರ, ಮಡಿಕೇರಿ ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ, ಪಕ್ಷ ಪ್ರಮುಖರಾದ ಉಮಾಪ್ರಭು, ಹೊಸೂರು ಸತೀಶ್ ಜೋಯಪ್ಪ, ಬೆಪ್ಪುರನ ಮೇದಪ್ಪ, ತಳೂರು ಕಿಶೋರ್ ಕುಮಾರ್, ಸುಬ್ರಮಣ್ಯ ಉಪಧ್ಯಾಯ, ನಾಗೇಶ್ ಕುಂದಲ್ಪಾಡಿ, ಕಾಂಗೀರ ಸತೀಶ್, ಪಿ.ಡಿ.ಪೊನ್ನಪ್ಪ, ರಾಬಿನ್ ದೇವಯ್ಯ, ಉಮೇಶ್ ಸುಬ್ರಮಣ , ಡೀನ್ ಬೋಪಣ್ಣ, ಬಿ.ಪಿ.ಡಿಶು, ಕವನ್ ಕಾವೇರಪ್ಪ ಮತ್ತಿತ್ತರರು ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!