ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶಭಕ್ತಿಯ ಹಿನ್ನೆಲೆಯ ಸಿನಿಮಾಗಳು ಪ್ರೇಕ್ಷಕರ ಮನಸ್ಸು ಗೆಲ್ಲುತ್ತವೆ ಎಂಬುದಕ್ಕೆ ‘ಬಾರ್ಡರ್ 2’ ಮತ್ತೊಂದು ಉದಾಹರಣೆ ಆಗಿದೆ. ಇತ್ತೀಚೆಗೆ ತೆರೆಕಂಡ ಈ ಸಿನಿಮಾ ಆರಂಭದಲ್ಲಿ ಮಿಶ್ರ ಪ್ರತಿಕ್ರಿಯೆ ಪಡೆದರೂ, ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ದಾಖಲಿಸುತ್ತಿದೆ. ಬಿಡುಗಡೆಗೊಂಡ ಮೊದಲ ಎರಡು ದಿನಗಳಲ್ಲಿ ಚಿತ್ರ ಗಮನಾರ್ಹ ಆದಾಯ ಗಳಿಸಿದ್ದು, ಮೂರನೇ ದಿನದಲ್ಲೇ 100 ಕೋಟಿ ರೂಪಾಯಿ ಕ್ಲಬ್‌ಗೆ ಸೇರುವ ನಿರೀಕ್ಷೆ ಮೂಡಿಸಿದೆ.
ವರದಿಗಳ ಪ್ರಕಾರ, ಜನವರಿ 23ರಂದು ಬಿಡುಗಡೆಯಾದ ಮೊದಲ ದಿನ ಚಿತ್ರ ಸುಮಾರು 30 ಕೋಟಿ ರೂಪಾಯಿ ಗಳಿಸಿದೆ. ಎರಡನೇ ದಿನ ಆದಾಯದಲ್ಲಿ ಹೆಚ್ಚಳ ಕಂಡುಬಂದಿದ್ದು, ಸುಮಾರು 35 ಕೋಟಿ ರೂಪಾಯಿ ಸಂಗ್ರಹವಾಗಿದೆ. ಭಾನುವಾರವೂ ಇದೇ ರೀತಿ ಕಲೆಕ್ಷನ್ ಮುಂದುವರಿದರೆ, ಮೂರೇ ದಿನಗಳಲ್ಲಿ ಶತಕ ಸಾಧನೆ ಸಾಧ್ಯವೆಂದು ಅಂದಾಜಿಸಲಾಗಿದೆ.
1997ರಲ್ಲಿ ಬಿಡುಗಡೆಯಾದ ‘ಬಾರ್ಡರ್’ ಚಿತ್ರದ ಮುಂದುವರಿದ ಭಾಗವಾಗಿ ‘ಬಾರ್ಡರ್ 2’ ತೆರೆಕಂಡಿದೆ. ಅನುರಾಗ್ ಸಿಂಗ್ ನಿರ್ದೇಶನದ ಈ ಚಿತ್ರದಲ್ಲಿ ಸನ್ನಿ ಡಿಯೋಲ್, ವರುಣ್ ಧವನ್, ದಿಲ್ಜಿತ್ ದೊಸಾಂಜ್, ಅಹಾನ್ ಶೆಟ್ಟಿ ಸೇರಿದಂತೆ ಪ್ರಮುಖ ಕಲಾವಿದರು ಅಭಿನಯಿಸಿದ್ದಾರೆ. 1971ರ ಭಾರತ–ಪಾಕಿಸ್ತಾನ ಯುದ್ಧದ ಹಿನ್ನೆಲೆಯ ಕಥೆ ಪ್ರೇಕ್ಷಕರಿಗೆ ವಿಶೇಷ ಆಕರ್ಷಣೆಯಾಗಿದೆ.
ಗಣರಾಜ್ಯೋತ್ಸವದ ಸಂದರ್ಭದಲ್ಲೇ ಬಿಡುಗಡೆಗೊಂಡಿರುವುದು ಚಿತ್ರಕ್ಕೆ ಹೆಚ್ಚುವರಿ ಲಾಭ ತಂದಿದೆ. ಮೂರು ದಿನಗಳ ಸತತ ರಜೆಯಿಂದ ಚಿತ್ರಮಂದಿರಗಳಲ್ಲಿ ಉತ್ತಮ ಜನಸಂದಣಿ ಕಾಣಿಸುತ್ತಿದೆ. ವಿಶೇಷವಾಗಿ, ವರುಣ್ ಧವನ್ ಅವರ ವೃತ್ತಿಜೀವನದಲ್ಲಿ ಮೊದಲ ದಿನ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಎಂಬ ಹೆಗ್ಗಳಿಕೆಗೆ ‘ಬಾರ್ಡರ್ 2’ ಪಾತ್ರವಾಗಿದೆ.



