ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಚಿತ್ರರಂಗದಲ್ಲಿ ಒಂದೇ ದಿನ ಹಲವು ದೊಡ್ಡ ಸಿನಿಮಾಗಳು ಬಿಡುಗಡೆಯಾಗುವ ಪೈಪೋಟಿ ಹೊಸದೇನಲ್ಲ. ಆದರೆ 2026ರ ಮಾರ್ಚ್ 19ಕ್ಕೆ ಈ ಪೈಪೋಟಿ ಮತ್ತಷ್ಟು ತೀವ್ರವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಯಶ್ ನಟನೆಯ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಇದೇ ದಿನ ಚಿತ್ರಮಂದಿರಕ್ಕೆ ಬರಲಿದ್ದು, ಅದೇ ದಿನ ತೆಲುಗು ನಟ ಅಡಿವಿಶೇಷ್ ಅಭಿನಯದ ‘ಡಕೈತ್’ ಬಿಡುಗಡೆಯಾಗುವುದಾಗಿ ಅಧಿಕೃತವಾಗಿ ಘೋಷಿಸಲಾಗಿದೆ.
ಇತ್ತೀಚೆಗೆ ‘ಡಕೈತ್’ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಈ ಕುರಿತು ಪ್ರಶ್ನೆ ಕೇಳಿದಾಗ ನಟ ಅಡಿವಿಶೇಷ್, ತಮ್ಮ ನಿರ್ಧಾರಕ್ಕೆ ಸ್ಪಷ್ಟ ಉತ್ತರ ನೀಡಿದ್ದಾರೆ. 2023ರಲ್ಲಿ ‘ಮೇಜರ್’ ಸಿನಿಮಾ ಬಿಡುಗಡೆಯಾಗಿದ್ದಾಗಲೂ ಅಕ್ಷಯ್ ಕುಮಾರ್ ಅಭಿನಯದ ‘ಪೃಥ್ವಿರಾಜ್’ ಮತ್ತು ಕಮಲ್ ಹಾಸನ್ ನಟನೆಯ ‘ವಿಕ್ರಂ’ ಒಂದೇ ಸಮಯದಲ್ಲಿ ಬಿಡುಗಡೆಯಾಗಿದ್ದನ್ನು ಅವರು ನೆನಪಿಸಿದರು. ದೊಡ್ಡ ಸಿನಿಮಾಗಳ ನಡುವೆಯೂ ತಮ್ಮ ಸಿನಿಮಾ ಪ್ರೇಕ್ಷಕರನ್ನು ತಲುಪುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ ಅವರು, “ಸಮುದ್ರದಲ್ಲಿ ಎಷ್ಟೇ ದೊಡ್ಡ ಮೀನುಗಳಿದ್ದರೂ ನಾವು ಚಿನ್ನದ ಮೀನು” ಎಂದು ಉತ್ತರಿಸಿದ್ದಾರೆ.
‘ಡಕೈತ್’ ಸಿನಿಮಾದಲ್ಲಿ ಮೃಣಾಲ್ ಠಾಕೂರ್ ನಾಯಕಿಯಾಗಿ ನಟಿಸಿದ್ದು, ಅನುರಾಗ್ ಕಶ್ಯಪ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಕಾಶ್ ರೈ ಮತ್ತು ಸುನಿಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಟೀಸರ್ ಈಗಾಗಲೇ ಗಮನ ಸೆಳೆದಿದ್ದು, ಎರಡು ದೊಡ್ಡ ಸಿನಿಮಾಗಳ ನಡುವಿನ ಈ ಬಿಡುಗಡೆ ನಿರ್ಧಾರದ ಫಲಿತಾಂಶ ಮುಂದಿನ ದಿನಗಳಲ್ಲಿ ತಿಳಿದುಬರಲಿದೆ.

