ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಡುಗಡೆಯಾದ ದಿನದಿಂದಲೇ ಮಿಶ್ರ ಪ್ರತಿಕ್ರಿಯೆ ಪಡೆಯುತ್ತಿರುವ ‘ಡೆವಿಲ್’ ಸಿನಿಮಾ ವೀಕೆಂಡ್‌ನಲ್ಲಿ ಸ್ವಲ್ಪ ಮಟ್ಟಿನ ಚೇತರಿಕೆ ಕಂಡಿದೆ. ಡಿಸೆಂಬರ್ 11ರಂದು ತೆರೆಗೆ ಬಂದ ಈ ಚಿತ್ರ, ವಾರದ ಮಧ್ಯದಲ್ಲಿ ಬಾಕ್ಸ್‌ಆಫೀಸ್‌ನಲ್ಲಿ ನಿಧಾನಗತಿಯ ಕಲೆಕ್ಷನ್ ಕಂಡರೂ, ಭಾನುವಾರ ಪ್ರೇಕ್ಷಕರ ಹಾಜರಾತಿ ಹೆಚ್ಚಾಗಿದೆ. ಆದರೂ ಚಿತ್ರದ ಒಟ್ಟು ಬಜೆಟ್‌ಗೆ ಹೋಲಿಸಿದರೆ ಈಗಿನ ಗಳಿಕೆ ಸಾಕಷ್ಟಿಲ್ಲ ಎಂಬ ಮಾತುಗಳು ಚಿತ್ರರಂಗದಲ್ಲಿ ಕೇಳಿಬರುತ್ತಿವೆ.
ದರ್ಶನ್ ಜೈಲಿನಲ್ಲಿ ಇರುವ ಪರಿಸ್ಥಿತಿಯಲ್ಲೂ ಅಭಿಮಾನಿಗಳು ಚಿತ್ರದ ಪರ ಪ್ರಚಾರ ನಡೆಸಿದ್ದರು. ಅದರ ಪರಿಣಾಮ ಮೊದಲ ದಿನವೇ ಸಿನಿಮಾ ಭರ್ಜರಿ ಓಪನಿಂಗ್ ಪಡೆದು 10 ಕೋಟಿ ರೂಪಾಯಿ ಸಂಗ್ರಹಿಸಿತ್ತು. ಆರಂಭಿಕ ವೀಕೆಂಡ್‌ನಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕರೂ, ಆ ನಂತರದ ದಿನಗಳಲ್ಲಿ ಗಳಿಕೆ ಕುಸಿತ ಕಂಡಿದೆ. ಆದರೆ ಭಾನುವಾರ ಮತ್ತೆ ಸ್ವಲ್ಪ ಚೇತರಿಕೆ ಕಂಡಿದ್ದು, ಡಿಸೆಂಬರ್ 21ರಂದು ಚಿತ್ರ 1.24 ಕೋಟಿ ರೂಪಾಯಿ ಗಳಿಸಿದೆ. ಅದಕ್ಕೂ ಮೊದಲು ಶನಿವಾರ 74 ಲಕ್ಷ ರೂಪಾಯಿ ಮಾತ್ರ ಕಲೆಕ್ಷನ್ ಆಗಿತ್ತು.
ಈವರೆಗೂ ‘ಡೆವಿಲ್’ ಸಿನಿಮಾ ಸುಮಾರು 27.6 ಕೋಟಿ ರೂಪಾಯಿ ಗಳಿಕೆ ತಲುಪಿದೆ ಎನ್ನಲಾಗಿದೆ. ಆದರೆ ಮುಂದಿನ ದಿನಗಳು ಚಿತ್ರಕ್ಕೆ ಬಹಳ ಮುಖ್ಯವಾಗಿವೆ. ಸುದೀಪ್ ನಟನೆಯ ‘ಮಾರ್ಕ್’ ಮತ್ತು ಅರ್ಜುನ್ ಜನ್ಯ ನಿರ್ದೇಶನದ ‘45’ ಸಿನಿಮಾಗಳು ತೆರೆಗೆ ಬರುತ್ತಿರುವುದರಿಂದ ‘ಡೆವಿಲ್’ಗೆ ಸ್ಪರ್ಧೆ ತೀವ್ರವಾಗಲಿದೆ.

