September 14, 2026
Monday, September 14, 2026
spot_img

CINE | ಚಿತ್ರಮಂದಿರಗಳು ಖಾಲಿ ಖಾಲಿ: ‘ಹೈವಾನ್’ ಬೆನ್ನೇರಿದ ನೆಗಟಿವ್ ವರ್ಡ್ ಆಫ್ ಮೌತ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್‌ನ ಖಿಲಾಡಿ ಅಕ್ಷಯ್ ಕುಮಾರ್ ಮತ್ತು ಸೈಫ್ ಆಲಿ ಖಾನ್ ಕಾಂಬಿನೇಷನ್ ಎಂದ ತಕ್ಷಣ ಥಿಯೇಟರ್‌ ಮುಂದೆ ಜನ ಕ್ಯೂ ನಿಲ್ತಾರೆ, ಬಾಕ್ಸ್ ಆಫೀಸ್‌ನಲ್ಲಿ ಕೋಟಿ ಕೋಟಿ ಹಣ ಹರಿಯುತ್ತೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆದ್ರೆ, ಈ ಸಲ ಲೆಕ್ಕಾಚಾರ ಕಂಪ್ಲೀಟ್ ಉಲ್ಟಾ ಆಗಿದೆ. ಇವರಿಬ್ಬರ ಸೈಕಾಲಜಿಕಲ್ ಆಕ್ಷನ್ ಥ್ರಿಲ್ಲರ್ ಸಿನಿಮಾ ‘ಹೈವಾನ್’ ಬಾಕ್ಸ್ ಆಫೀಸ್‌ನಲ್ಲಿ ಅಕ್ಷರಶಃ ಮುಗ್ಗರಿಸಿದ್ದು, ಪ್ರೇಕ್ಷಕರಿಂದ ತೀರಾ ನಿರಾಸಾದಾಯಕ ಪ್ರತಿಕ್ರಿಯೆ ಪಡೆದುಕೊಂಡಿದೆ.

ಶುಕ್ರವಾರ ರಿಲೀಸ್ ಆದ ಮೊದಲ ದಿನವೇ ನೀರಸ ಆರಂಭ ಕಂಡಿದ್ದ ಈ ಚಿತ್ರ, ವಾರಾಂತ್ಯದಲ್ಲಾದರೂ ಚೇತರಿಸಿಕೊಳ್ಳಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಭಾನುವಾರದ ಕಲೆಕ್ಷನ್ ಲೆಕ್ಕ ನೋಡಿದರೆ ಚಿತ್ರತಂಡಕ್ಕೆ ಶಾಕ್ ಹೊಡೆದಂತಾಗಿದೆ. ಭಾನುವಾರದಂತೆ ರಜಾ ದಿನದಲ್ಲೂ ಈ ಸಿನಿಮಾ ಗಳಿಸಿದ್ದು ಕೇವಲ 2 ಕೋಟಿ ಮಾತ್ರ! ಇದರೊಂದಿಗೆ ಮೊದಲ ಮೂರು ದಿನಗಳ ಒಟ್ಟು ಗಳಿಕೆ ಬರಿ ರೂ. 6.75 ಕೋಟಿಗೆ ಬಂದು ನಿಂತಿದೆ.

ಸಾಮಾನ್ಯವಾಗಿ ಯಾವುದೇ ಸಿನಿಮಾ ಮೊದಲ ದಿನ ಕಮ್ಮಿ ಬ್ಯುಸಿನೆಸ್ ಮಾಡಿದರೂ, ಶನಿವಾರ ಮತ್ತು ಭಾನುವಾರ ಕಲೆಕ್ಷನ್ ಪಕ್ಕಾ ಜಾಸ್ತಿಯಾಗುತ್ತದೆ. ಆದರೆ ‘ಹೈವಾನ್’ ವಿಚಾರದಲ್ಲಿ ಆಗಿದ್ದೇ ಬೇರೆ. ಶುಕ್ರವಾರಕ್ಕಿಂತ ಶನಿವಾರ, ಶನಿವಾರಕ್ಕಿಂತ ಭಾನುವಾರ ಕಲೆಕ್ಷನ್ ದಿನದಿಂದ ದಿನಕ್ಕೆ ಕುಸಿಯುತ್ತಾ ಹೋಯಿತು. ಯಾವುದೇ ಗ್ರೋತ್ ಕಾಣದೆ, ಗ್ರಾಫ್ ಪೂರ್ತಿ ಕೆಳಗೆ ಇಳಿದಿರೋದು ಗಾಂಧಿನಗರದಿಂದ ಹಿಡಿದು ಮುಂಬೈ ಚಿತ್ರರಂಗದವರೆಗೆ ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದೆ.

ಸಿನೆಮಾ ರಿಲೀಸ್ ಆದ ಮೊದಲ ಪ್ರದರ್ಶನದಿಂದಲೇ ಪ್ರೇಕ್ಷಕರಿಂದ ನೆಗೆಟಿವ್ ರಿವ್ಯೂಗಳು ಬರಲು ಶುರುವಾದವು. “ಸ್ಕ್ರಿಪ್ಟ್‌ನಲ್ಲಿ ದಮ್ ಇಲ್ಲ, ಎಂಟರ್‌ಟೇನ್‌ಮೆಂಟ್ ಕಮ್ಮಿ” ಅನ್ನೋ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದೇ ತಡ, ಜನ ಥಿಯೇಟರ್‌ ಕಡೆ ಮುಖ ಮಾಡುವುದನ್ನೇ ಬಿಟ್ಟರು. ಪ್ರೇಕ್ಷಕರ ಈ ‘ವರ್ಡ್ ಆಫ್ ಮೌತ್’ ಸಿನೆಮಾಗೆ ದೊಡ್ಡ ಪೆಟ್ಟು ಕೊಟ್ಟಿದೆ.

ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ಈ ಸ್ಟಾರ್ ನಟರ ಬಿಗ್ ಬಜೆಟ್ ಸಿನಿಮಾ, ಈಗ ಮೊದಲ ವಾರಾಂತ್ಯದಲ್ಲೇ ಕಲೆಕ್ಷನ್ ಕುಸಿದಿದ್ದು, ಮುಂಬರುವ ದಿನಗಳಲ್ಲಿ ಇನ್ಯಾವ ಮಟ್ಟಕ್ಕೆ ಕುಸಿಯಲಿದೆಯೋ ಕಾದು ನೋಡಬೇಕಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !