ಹೊಸದಿಗಂತ ಡಿಜಿಟಲ್ ಡೆಸ್ಕ್:
ಯಶಸ್ಸಿನ ಶಿಖರದಲ್ಲಿದ್ದಾಗಲೇ ಪ್ರಿಯಾಂಕಾ ಅಮೆರಿಕಕ್ಕೆ ಹಾರಿದ್ದು ಅದೆಷ್ಟೋ ಜನರಿಗೆ ಆಶ್ಚರ್ಯ ತಂದಿತ್ತು. ಆದರೆ ಇತ್ತೀಚಿನ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿರುವ ಅವರು, “ನಾನು ಎಂದಿಗೂ ಹಿಂದಿ ಚಿತ್ರರಂಗವನ್ನು ಬಿಡಲು ಬಯಸಿರಲಿಲ್ಲ. ಆದರೆ, ಅಲ್ಲಿನ ಕೆಲವು ಸನ್ನಿವೇಶಗಳು ಮತ್ತು ಒತ್ತಡಗಳು ನನ್ನನ್ನು ಹೊಸ ದಾರಿ ಹುಡುಕುವಂತೆ ಪ್ರೇರೇಪಿಸಿದವು. ಕಲಾವಿದೆಯಾಗಿ ಬೆಳೆಯಲು ನನಗೆ ಅಲ್ಲಿ ಮಿತಿಗಳು ಎದುರಾದವು, ಹೀಗಾಗಿ ಬಲವಂತವಾಗಿ ನಾನು ಹೊರಗೆ ಅವಕಾಶಗಳನ್ನು ಹುಡುಕಬೇಕಾಯಿತು” ಎಂದು ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.
ಹಾಲಿವುಡ್‌ನಲ್ಲಿ ನೆಲೆಸಿದ್ದರೂ ಪ್ರಿಯಾಂಕಾ ಅವರಿಗೆ ಭಾರತೀಯ ಸಿನಿಮಾಗಳ ಮೇಲಿನ ಪ್ರೀತಿ ಕಡಿಮೆಯಾಗಿಲ್ಲ. “ನನಗೆ ಭಾರತೀಯ ಚಿತ್ರಗಳೆಂದರೆ ಜೀವ. ನಾನು ಹಾಲಿವುಡ್ ಅಥವಾ ಬಾಲಿವುಡ್ ಎರಡರಲ್ಲಿ ಒಂದನ್ನು ಮಾತ್ರ ಆಯ್ಕೆ ಮಾಡಿಕೊಳ್ಳಲು ಎಂದಿಗೂ ಇಷ್ಟಪಡುವುದಿಲ್ಲ. ಎರಡೂ ಕಡೆ ಸಕ್ರಿಯವಾಗಿರುವುದು ನನಗೆ ಖುಷಿ ನೀಡುತ್ತದೆ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಪ್ರಿಯಾಂಕಾ ಅಭಿಮಾನಿಗಳಿಗೆ ಈಗ ಮತ್ತೊಂದು ಸಂಭ್ರಮದ ಸುದ್ದಿ ಇದೆ. ಸ್ಟಾರ್ ಡೈರೆಕ್ಟರ್ ಎಸ್.ಎಸ್. ರಾಜಮೌಳಿ ನಿರ್ದೇಶನದ, ಮಹೇಶ್ ಬಾಬು ನಟನೆಯ ಬಹುನಿರೀಕ್ಷಿತ ‘ವಾರಣಾಸಿ’ ಚಿತ್ರದ ಮೂಲಕ ಪ್ರಿಯಾಂಕಾ ಮತ್ತೆ ಭಾರತೀಯ ತೆರೆಗೆ ಮರಳುತ್ತಿದ್ದಾರೆ. ಈ ಚಿತ್ರದ ಮೂಲಕ ಅವರು ದಕ್ಷಿಣ ಭಾರತದ ಸಿನಿಮಾದಲ್ಲೂ ಮೋಡಿ ಮಾಡಲು ಸಜ್ಜಾಗಿದ್ದಾರೆ.



