ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದ ನಟ ವಿಜಯ್ ಅಭಿನಯದ ‘ಜನ ನಾಯಗನ್’ ಚಿತ್ರಕ್ಕೆ ಕೊನೆಗೂ ದೊಡ್ಡ ಮುಕ್ತಿ ಸಿಕ್ಕಿದೆ. ಮದ್ರಾಸ್ ಹೈಕೋರ್ಟ್ ಚಿತ್ರಕ್ಕೆ ತಕ್ಷಣವೇ ‘ಯುಎ 16+’ ಸೆನ್ಸಾರ್ ಪ್ರಮಾಣಪತ್ರ ನೀಡುವಂತೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC)ಗೆ ನಿರ್ದೇಶನ ನೀಡಿದೆ. ಈ ಆದೇಶದಿಂದ ಚಿತ್ರತಂಡಕ್ಕೆ ಭಾರೀ ನೆಮ್ಮದಿ ಸಿಕ್ಕಿದ್ದು, ಬಿಡುಗಡೆ ದಿನಾಂಕವನ್ನು ಶೀಘ್ರವೇ ಘೋಷಿಸುವ ಸಾಧ್ಯತೆ ಇದೆ.
ಸೆನ್ಸಾರ್ ಪ್ರಮಾಣಪತ್ರ ನೀಡದೆ ವಿಳಂಬ ಮಾಡಲಾಗಿದೆ ಎಂದು ಆರೋಪಿಸಿ ನಿರ್ಮಾಣ ಸಂಸ್ಥೆ ಕೆವಿಎನ್ ಮದ್ರಾಸ್ ಹೈಕೋರ್ಟ್ ಮೊರೆ ಹೋಗಿತ್ತು. ಮಂಡಳಿ ಸೂಚಿಸಿದ ಎಲ್ಲಾ ಬದಲಾವಣೆಗಳನ್ನು ಪಾಲಿಸಿದ್ದರೂ ಪ್ರಮಾಣಪತ್ರ ನೀಡಿಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು. ಜೊತೆಗೆ ಚಿತ್ರಕ್ಕೆ ಭಾರೀ ಮೊತ್ತದ ಬಂಡವಾಳ ಹೂಡಲಾಗಿದೆ ಎಂಬುದನ್ನೂ ಸಂಸ್ಥೆ ಕೋರ್ಟ್ ಗಮನಕ್ಕೆ ತಂದಿತ್ತು.
ಇದನ್ನೂ ಓದಿ: Kitchen tips | ಹಾಲು ಉಕ್ಕಿ ಚೆಲ್ಲದಂತೆ ತಡೆಯೋಕೇ ಈ ಟ್ರಿಕ್ಸ್ ಯೂಸ್ ಮಾಡಿ!
ಡಿಸೆಂಬರ್ ತಿಂಗಳಲ್ಲೇ ‘ಜನ ನಾಯಗನ್’ ಚಿತ್ರವನ್ನು ಸೆನ್ಸಾರ್ ಮಂಡಳಿಗೆ ಪ್ರದರ್ಶಿಸಲಾಗಿದ್ದು, 27 ಕಡೆಗಳಲ್ಲಿ ಕಟ್, ಮ್ಯೂಟ್ ಮತ್ತು ಬದಲಾವಣೆ ಮಾಡಲು ಸೂಚಿಸಲಾಗಿತ್ತು. ಈ ಬದಲಾವಣೆಗಳ ಬಳಿಕವೂ ಚಿತ್ರವನ್ನು ರಿವ್ಯೂ ಸಮಿತಿಗೆ ಕಳುಹಿಸುವ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಇದರಿಂದ ಪ್ರಮಾಣಪತ್ರ ಪ್ರಕ್ರಿಯೆ ಸ್ಥಗಿತಗೊಂಡಿತ್ತು.
ಬದಲಾವಣೆಗಳನ್ನೆಲ್ಲಾ ಮಾಡಿದ್ದ ಬಳಿಕ ಮತ್ತೆ ರಿವ್ಯೂ ಸಮಿತಿಗೆ ಕಳುಹಿಸುವ ಅಗತ್ಯವಿಲ್ಲ ಎಂಬ ಚಿತ್ರತಂಡದ ವಾದವನ್ನು ಕೋರ್ಟ್ ಒಪ್ಪಿಕೊಂಡಿದೆ. ಶುಕ್ರವಾರ ಬೆಳಿಗ್ಗೆ 9 ಗಂಟೆಗೆ ನ್ಯಾಯಮೂರ್ತಿ ಪಿ.ಟಿ. ಆಶಾ ಆದೇಶ ಹೊರಡಿಸಿದ್ದು, ‘ಜನ ನಾಯಗನ್’ ಚಿತ್ರಕ್ಕೆ ತಕ್ಷಣ ‘ಯುಎ 16+’ ಪ್ರಮಾಣಪತ್ರ ನೀಡುವಂತೆ ಸ್ಪಷ್ಟ ಸೂಚನೆ ನೀಡಲಾಗಿದೆ.

