ಹೊಸದಿಗಂತ ಡಿಜಿಟಲ್ ಡೆಸ್ಕ್:
‘ಕಾಂತಾರ’ ಸಿನಿಮಾ ಬಳಿಕ ದೈವ ಪರಂಪರೆ ಮತ್ತು ತುಳುನಾಡಿನ ಸಂಸ್ಕೃತಿಯ ಬಗ್ಗೆ ದೇಶಾದ್ಯಂತ ಕುತೂಹಲ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ದೈವ ನಂಬಿಕೆಯನ್ನೇ ಆಧಾರವಾಗಿ ಇಟ್ಟುಕೊಂಡು ರೂಪುಗೊಂಡಿರುವ ಹೊಸ ಸಿನಿಮಾ ‘ಕಟ್ಟೆಮಾರ್’ ಶೀಘ್ರದಲ್ಲೇ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ‘ಸು ಫ್ರಮ್ ಸೋ’ ಖ್ಯಾತಿಯ ಜೆಪಿ ತುಮಿನಾಡು ಹಾಗೂ ‘ಕಾಂತಾರ’ದಲ್ಲಿ ಗುರುವ ಪಾತ್ರದ ಮೂಲಕ ಗಮನ ಸೆಳೆದ ಸ್ವರಾಜ್ ಶೆಟ್ಟಿ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
‘ಕಟ್ಟೆಮಾರ್’ ಚಿತ್ರದಲ್ಲಿ ನೇರವಾಗಿ ದೈವಾರಾಧನೆ ಪ್ರದರ್ಶನ ಮಾಡುವುದಕ್ಕಿಂತ, ದೈವ ನಂಬಿಕೆ ಮಾನವನ ಬದುಕಿಗೆ ಹೇಗೆ ಅಪ್ರತ್ಯಕ್ಷವಾಗಿ ರಕ್ಷಕ ಶಕ್ತಿಯಂತೆ ಕೆಲಸ ಮಾಡುತ್ತದೆ ಎಂಬ ಅಂಶವನ್ನು ಸೂಕ್ಷ್ಮವಾಗಿ ಹೇಳುವ ಪ್ರಯತ್ನ ಮಾಡಲಾಗಿದೆ. ಯಾವುದೇ ಅತಿರೇಕವಿಲ್ಲದೆ, ತುಳುನಾಡಿನ ನಂಬಿಕೆಗಳು, ಸಂಸ್ಕೃತಿ, ಪ್ರೀತಿ ಮತ್ತು ಸಸ್ಪೆನ್ಸ್ ಅಂಶಗಳನ್ನು ಸಮತೋಲನದಿಂದ ಬೆರೆಸಿ ಕಥೆ ಕಟ್ಟಲಾಗಿದೆ ಎಂದು ಚಿತ್ರತಂಡ ಹೇಳಿದೆ.
ರಕ್ಷಿತ್ ಗಾಣಿಗ ಹಾಗೂ ಸಚಿನ್ ಕಟ್ಲ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸಿನಿಮಾ ಜನವರಿ 23ರಂದು ತುಳು ಭಾಷೆಯಲ್ಲಿ ತೆರೆಕಾಣಲಿದೆ. ಈಗಾಗಲೇ ಕನ್ನಡಕ್ಕೆ ಡಬ್ಬಿಂಗ್ ಆಗಿದ್ದು, ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡುವ ಯೋಜನೆ ಇದೆ. ಬಿಡುಗಡೆಗೊಂಡಿರುವ ಟ್ರೇಲರ್ ಪ್ರೇಕ್ಷಕರ ಗಮನ ಸೆಳೆದಿದೆ.
‘ಸು ಫ್ರಮ್ ಸೋ’ ಬಳಿಕ ಜೆಪಿ ತುಮಿನಾಡು ಅವರ ಮೇಲೆ ನಿರೀಕ್ಷೆ ಹೆಚ್ಚಿದ್ದು, ‘ಕಟ್ಟೆಮಾರ್’ ಮೂಲಕ ಮತ್ತೆ ಪ್ರೇಕ್ಷಕರ ಮನ ಗೆಲ್ಲುವ ವಿಶ್ವಾಸ ಚಿತ್ರತಂಡಕ್ಕಿದೆ. ಸಂತೋಷ್ ಆಚಾರ್ಯ ಛಾಯಾಗ್ರಹಣ, ಗಣೇಶ್ ನಿರ್ಚಾಲ್ ಸಂಕಲನ ಈ ಚಿತ್ರಕ್ಕಿದ್ದು, ಅಸ್ತ್ರ ಪ್ರೊಡಕ್ಷನ್ ಈ ಸಿನಿಮಾವನ್ನು ಪ್ರಸ್ತುತಪಡಿಸಿದೆ.


