October 10, 2026
Saturday, October 10, 2026
spot_img

CINE | ‘ಜನನಾಯಗನ್’ ಚಿತ್ರಕ್ಕೆ ಪೈರಸಿ, ರಿಮೇಕ್ ತಲೆನೋವು: ಸೆನ್ಸಾರ್ ಕ್ಲಿಯರೆನ್ಸ್‌ಗಾಗಿ ಜಿದ್ದಾಜಿದ್ದಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೋಲಿವುಡ್‌ನ ಸ್ಟಾರ್ ನಟ, ತಮಿಳುನಾಡಿನ ಪ್ರಸ್ತುತ ಮುಖ್ಯಮಂತ್ರಿ ದಳಪತಿ ವಿಜಯ್ ಅಭಿನಯದ ಕೊನೆಯ ಹಾಗೂ ಬಹುನಿರೀಕ್ಷಿತ ಚಿತ್ರ ‘ಜನನಾಯಗನ್’ ಬಿಡುಗಡೆಯ ಸುತ್ತಲಿನ ಅನಿಶ್ಚಿತತೆಯ ಮೋಡಗಳು ಇನ್ನೂ ತಿಳಿಯಾದಂತೆ ಕಾಣುತ್ತಿಲ್ಲ. ಸಿನಿರಂಗದಲ್ಲಿ ಭಾರಿ ಕ್ರೇಜ್ ಸೃಷ್ಟಿಸಿರುವ ಈ ಸಿನಿಮಾಗೆ ಸೆನ್ಸಾರ್ ಮಂಡಳಿಯಿಂದ ಗ್ರೀನ್ ಸಿಗ್ನಲ್ ಸಿಗುವುದು ಮತ್ತಷ್ಟು ತಡವಾಗುತ್ತಿದ್ದು, ಚಿತ್ರದ ಬಿಡುಗಡೆ ಪ್ರಕ್ರಿಯೆ ನನೆಗುದಿಗೆ ಬಿದ್ದಿದೆ. ಈ ಅನಿರೀಕ್ಷಿತ ವಿಳಂಬವು ಚಿತ್ರದ ಮೇಲೆ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿರುವ ವಿತರಕರು ಮತ್ತು ಪಾಲುದಾರರಲ್ಲಿ ತೀವ್ರ ಆತಂಕ ಮೂಡಿಸಿದೆ.

ವಿತರಕರ ರಕ್ಷಣೆಗೆ ನಿಂತ ಕೆವಿಎನ್ ಪ್ರೊಡಕ್ಷನ್ಸ್!

ಚಿತ್ರರಂಗದ ವಿಶ್ವಾಸಾರ್ಹ ಮೂಲಗಳ ಪ್ರಕಾರ, ‘ಜನನಾಯಗನ್’ ಚಿತ್ರದ ನಿರ್ಮಾಣ ಸಂಸ್ಥೆಯಾದ ಕೆವಿಎನ್ ಪ್ರೊಡಕ್ಷನ್ಸ್ ಈಗ ವಿತರಕರ ಹಿತರಕ್ಷಣೆಗಾಗಿ ಅತ್ಯಂತ ಮಹತ್ವದ ಹಾಗೂ ಧೈರ್ಯದ ನಿರ್ಧಾರವೊಂದನ್ನು ತೆಗೆದುಕೊಳ್ಳಲು ಮುಂದಾಗಿದೆ. ಸೆನ್ಸಾರ್ ಮಂಡಳಿಯ ಸಮಸ್ಯೆಗಳು ಸಂಪೂರ್ಣವಾಗಿ ಬಗೆಹರಿದು, ಸಿನಿಮಾ ಥಿಯೇಟರ್‌ಗೆ ಬರುವವರೆಗೂ ವಿತರಕರು ಹೂಡಿರುವ ಹಣವನ್ನು ಮರುಪಾವತಿ ಮಾಡಲು ನಿರ್ಮಾಪಕರು ಗಂಭೀರವಾಗಿ ಆಲೋಚಿಸುತ್ತಿದ್ದಾರೆ ಎನ್ನಲಾಗಿದೆ.

ಇದರರ್ಥ, ಸಿನಿಮಾ ರಿಲೀಸ್ ಆಗುವವರೆಗಿನ ಸಂಪೂರ್ಣ ಆರ್ಥಿಕ ಜವಾಬ್ದಾರಿ ಮತ್ತು ರಿಸ್ಕ್ ಅನ್ನು ನಿರ್ಮಾಪಕರೇ ತಮ್ಮ ಹೆಗಲಿಗೆ ತೆಗೆದುಕೊಳ್ಳಲಿದ್ದಾರೆ. ಈ ಮಾಸ್ಟರ್ ಪ್ಲಾನ್‌ನಿಂದಾಗಿ ಕೆವಿಎನ್ ಪ್ರೊಡಕ್ಷನ್ಸ್ ಮೇಲಿನ ಆರ್ಥಿಕ ಹೊರೆ ಗಣನೀಯವಾಗಿ ಹೆಚ್ಚಾಗಲಿದ್ದರೂ, ಮಾರುಕಟ್ಟೆಯಲ್ಲಿ ವಿತರಕರ ನಂಬಿಕೆ ಉಳಿಸಿಕೊಳ್ಳಲು ಇದು ಅನಿವಾರ್ಯವಾಗಿದೆ ಎಂದು ಹೇಳಲಾಗುತ್ತಿದೆ.

Must Read