October 1, 2026
Thursday, October 1, 2026
spot_img

CINE | ‘ಟಾಕ್ಸಿಕ್’ ಮ್ಯೂಸಿಕಲ್ ಧಮಾಕಾ: ಚಿತ್ರದಲ್ಲಿದೆಯಾ ಬರೋಬ್ಬರಿ 10 ಹಾಡುಗಳು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿನಿಮಾ ರಂಗದಲ್ಲಿ ಹಾಡುಗಳು ಸೃಷ್ಟಿಸುವ ಕ್ರೇಜ್ ಚಿತ್ರದ ಯಶಸ್ಸಿಗೆ ಪ್ರಮುಖ ಅಡಿಪಾಯ. ಇತ್ತೀಚೆಗೆ ತೆರೆಕಂಡ ‘ಧುರಂಧರ್’ ಹಾಗೂ ‘ಧುರಂಧರ್ 2’ ಸಿನಿಮಾಗಳ ಅಭೂತಪೂರ್ವ ಯಶಸ್ಸಿಗೆ ಅವುಗಳ ಸಂಗೀತವೇ ಸಾಕ್ಷಿಯಾಗಿತ್ತು. ಈಗ ಅದೇ ಹಾದಿಯಲ್ಲಿ ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಕೂಡ ದೊಡ್ಡ ಮಟ್ಟದ ಮ್ಯೂಸಿಕಲ್ ಹೈಪ್ ಸೃಷ್ಟಿಸುತ್ತಿದೆ.

ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟರ್ ವೈರಲ್!

ಈಗಾಗಲೇ ರಿಲೀಸ್ ಆಗಿರುವ ‘ಟಾಕ್ಸಿಕ್’ ಚಿತ್ರದ ಎರಡು ಹಾಡುಗಳು ಪ್ರೇಕ್ಷಕರಿಂದ ಅದ್ಭುತ ಮೆಚ್ಚುಗೆ ಪಡೆದುಕೊಂಡಿವೆ. ಇದರ ಬೆನ್ನಲ್ಲೇ, ಚಿತ್ರದಲ್ಲಿ ಬರೋಬ್ಬರಿ 10 ಹಾಡುಗಳು ಇರಲಿವೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದೆ. ಇದಕ್ಕೆ ಸಂಬಂಧಿಸಿದ ಫೋಟೋವೊಂದು ವೈರಲ್ ಆಗಿದ್ದು, ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿರುವ ಬೆನ್ನಲ್ಲೇ ಅಭಿಮಾನಿಗಳ ಕಾತುರ ಮುಗಿಲು ಮುಟ್ಟಿದೆ.

3 ಗಂಟೆ 14 ನಿಮಿಷಗಳ ರಂಜನೆ: 40 ನಿಮಿಷ ಬರೀ ಸಂಗೀತ!

ವರದಿಗಳ ಪ್ರಕಾರ, ಈ ಸಿನಿಮಾ ಸುಮಾರು 3 ಗಂಟೆ 14 ನಿಮಿಷಗಳ ದೀರ್ಘಾವಧಿ ಹೊಂದಿರಲಿದೆ. ಇದರಲ್ಲಿ ಸರಿಸುಮಾರು 40 ನಿಮಿಷಗಳ ಕಾಲ ಹಾಡುಗಳೇ ರಂಜಿಸಲಿವೆ. ಹೆಚ್ಚಿನ ಹಾಡುಗಳು ಕಥೆಯ ಓಟಕ್ಕೆ ತೊಂದರೆಯಾಗದಂತೆ ಬ್ಯಾಕ್‌ಗ್ರೌಂಡ್‌ನಲ್ಲಿ ಬರಲಿದ್ದು, ಸಿನಿಮಾದ ಗಂಭೀರತೆಯನ್ನು ಮತ್ತು ಭಾವನಾತ್ಮಕ ಸನ್ನಿವೇಶಗಳನ್ನು ಮತ್ತಷ್ಟು ಎತ್ತಿಹಿಡಿಯಲಿವೆ.

ಅದ್ದೂರಿ ತಾರಾಗಣ ಹಾಗೂ ವಿಶ್ವಮಟ್ಟದ ತಂತ್ರಜ್ಞರು

‘ಕೆಜಿಎಫ್ 2’ ಬ್ಲಾಕ್‌ಬಸ್ಟರ್ ನಂತರ ಯಶ್ ಅವರ 19ನೇ ಅಭಿನಯದ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್ ಅಪ್ಸ್’ ಚಿತ್ರವನ್ನು ಗೀತು ಮೋಹನ್‌ದಾಸ್ ನಿರ್ದೇಶಿಸುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಹಾಗೂ ಯಶ್ ಅವರ ಮಾನ್‌ಸ್ಟರ್ ಮೈಂಡ್ಸ್ ಸಂಸ್ಥೆಗಳು ಅದ್ದೂರಿಯಾಗಿ ಇದನ್ನು ನಿರ್ಮಿಸುತ್ತಿವೆ. ವಿಶಾಲ್ ಮಿಶ್ರಾ ಅವರ ಸಂಗೀತ ಮತ್ತು ರವಿ ಬಸ್ರೂರು ಅವರ ಹಿನ್ನೆಲೆ ಸಂಗೀತ ಈ ಡಾರ್ಕ್ ಆಕ್ಷನ್ ಥ್ರಿಲ್ಲರ್‌ಗೆ ಹೊಸ ಮೆರುಗು ನೀಡಲಿದೆ. ನಯನತಾರಾ, ಕಿಯಾರಾ ಅಡ್ವಾಣಿ ಹಾಗೂ ತಾರಾ ಸುತಾರಿಯಾ ಅವರಂತಹ ದಿಗ್ಗಜ ತಾರಾಗಣ ಹೊಂದಿರುವ ಈ ಚಿತ್ರ ಆಗಸ್ಟ್ 26ರಂದು ಬೆಳ್ಳಿಪರದೆಯ ಮೇಲೆ ಧೂಳೆಬ್ಬಿಸಲು ಸಜ್ಜಾಗಿದೆ.

Must Read