Monday, November 17, 2025

CINE | ‘ದಿ ರಾಜಾ ಸಾಬ್’ ಬಿಡುಗಡೆ ದಿನಾಂಕ ಮುಂದೆ ಹೋಯ್ತಾ? ಗಾಸಿಪ್‌ಗೆ ತೆರೆ ಎಳೆದ ಟೀಮ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರೆಬೆಲ್ ಸ್ಟಾರ್ ಪ್ರಭಾಸ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ‘ದಿ ರಾಜಾ ಸಾಬ್’ ಇತ್ತೀಚೆಗೆ ಬಿಡುಗಡೆಯಾದ ಟ್ರೇಲರ್‌ನಿಂದಲೇ ದೇಶಾದ್ಯಂತ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಪ್ರೇಕ್ಷಕರ ಗಮನ ಸೆಳೆದಿದೆ. ವಿಭಿನ್ನ ಫಿಕ್ಷನ್ ಕಥಾಹಂದರ ಮತ್ತು ಪ್ರಭಾಸ್ ಅವರ ಅದ್ಭುತ ಪ್ರೆಸೆನ್ಸ್ ಸಿನಿಮಾ ಕುರಿತ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದೆ. ಆದರೆ ಚಿತ್ರದ ಬಿಡುಗಡೆ ದಿನಾಂಕದ ಬಗ್ಗೆ ಹರಿದಾಡುತ್ತಿದ್ದ ಗಾಸಿಪ್‌ಗಳಿಗೆ ಈಗ ಚಿತ್ರತಂಡ ಫುಲ್ ಸ್ಟಾಪ್ ಹಾಕಿದೆ.

ಸಂಕ್ರಾಂತಿ ಹಬ್ಬದ ಪ್ರಯುಕ್ತ ಈ ಸಿನಿಮಾ ಬಿಡುಗಡೆಯಾಗಲಿದೆ ಎಂಬ ನಿರೀಕ್ಷೆಯಿತ್ತು. ಆದರೆ ಇತ್ತೀಚೆಗೆ ಚಿತ್ರದ ಬಿಡುಗಡೆ ಮುಂದೂಡಲಾಗಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯಿತು. ಈ ಹಿನ್ನೆಲೆಯಲ್ಲಿ ಚಿತ್ರತಂಡ ಅಧಿಕೃತ ಸ್ಪಷ್ಟನೆ ನೀಡುತ್ತಾ, “ದಿ ರಾಜಾ ಸಾಬ್ ಚಿತ್ರ ಜನವರಿ 9ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಿಗದಿಯಂತೆ ಬಿಡುಗಡೆ ಆಗಲಿದೆ” ಎಂದು ಘೋಷಿಸಿದೆ. ಯಾವುದೇ ವಿಳಂಬವಿಲ್ಲದೆ, ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳು ವೇಗವಾಗಿ ನಡೆಯುತ್ತಿವೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.

ಚಿತ್ರತಂಡದ ಪ್ರಕಾರ, ಪ್ರತಿಯೊಂದು ವಿಭಾಗವು ಸಮನ್ವಯದಿಂದ ಕೆಲಸ ಮಾಡುತ್ತಿದ್ದು, ಚಿತ್ರವನ್ನು ಅತ್ಯುನ್ನತ ತಾಂತ್ರಿಕ ಗುಣಮಟ್ಟದಲ್ಲಿ ತಯಾರಿಸಲಾಗುತ್ತಿದೆ. ಈ ಸಿನಿಮಾ “ಲಾರ್ಜರ್ ದ್ಯಾನ್ ಲೈಫ್” ಶೈಲಿಯಲ್ಲಿ ನಿರ್ಮಾಣವಾಗಿದ್ದು, ಪ್ರಪಂಚದಾದ್ಯಂತದ ಪ್ರೇಕ್ಷಕರಿಗೆ ಅತ್ಯುತ್ತಮ ಥಿಯೇಟರ್ ಅನುಭವ ನೀಡುವುದು ಇದರ ಉದ್ದೇಶವಾಗಿದೆ. ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್‌ನಲ್ಲಿ ಈ ಚಿತ್ರವನ್ನು ನಿರ್ದೇಶಕ ಮಾರುತಿ ನಿರ್ದೇಶಿಸಿದ್ದಾರೆ.

ದಿ ರಾಜಾ ಸಾಬ್ ಪ್ರಭಾಸ್ ಅವರ ಇತ್ತೀಚಿನ ಆಕ್ಷನ್‌ ಚಿತ್ರಗಳಿಗಿಂತ ಸಂಪೂರ್ಣ ಭಿನ್ನ. ಇದು ರೊಮ್ಯಾಂಟಿಕ್ ಹಾರರ್ ಕಾಮಿಡಿ ಆಗಿದ್ದು, ಪ್ರಭಾಸ್ ಅಭಿಮಾನಿಗಳಿಗೆ ಹೊಸ ರೀತಿಯ ಪಾತ್ರವನ್ನು ಪರಿಚಯಿಸುತ್ತದೆ. ಎರಡು ವರ್ಷಗಳ ಕಾಲ ಚಿತ್ರೀಕರಣ ನಡೆದ ಈ ಚಿತ್ರವು ಕೊನೆಗೂ ಮುಕ್ತಾಯ ಹಂತ ತಲುಪಿದೆ. ಕೇವಲ ಒಂದು ಪ್ರೇಮಗೀತೆಯ ಚಿತ್ರೀಕರಣ ಮಾತ್ರ ಬಾಕಿಯಿದ್ದು, ಅದು ಡಿಸೆಂಬರ್‌ನಲ್ಲಿ ಶೂಟ್ ಆಗಲಿದೆ.

error: Content is protected !!