ಸಿದ್ದರಾಮಯ್ಯನವರ ಹೇಳಿಕೆ ಬಗ್ಗೆ ನಿಮ್ಮ ನಿಲುವು ಸ್ಪಷ್ಟಪಡಿಸಿ: ಕಾಂಗ್ರೆಸ್ಸಿಗರಿಗೆ ಕೊಡಗು ಜಿಲ್ಲಾ ಬಿಜೆಪಿ ಸವಾಲು

ಹೊಸದಿಗಂತ ವರದಿ, ಮಡಿಕೇರಿ:
ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗೋಹತ್ಯೆ ಮತ್ತು ಮತಾಂತರ ನಿಷೇಧ ಕಾಯ್ದೆಯನ್ನು ರದ್ದುಪಡಿಸುವುದರೊಂದಿಗೆ ಟಿಪ್ಪು ಜಯಂತಿಯನ್ನು ಮತ್ತೆ ಆಚರಿಸುವುದಾಗಿ ಸಿದ್ದರಾಮಯ್ಯ ಅವರು ಘೋಷಿಸಿದ್ದು, ಈ ಬಗ್ಗೆ ಕೊಡಗು ಜಿಲ್ಲಾ ಕಾಂಗ್ರೆಸ್ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಕೊಡಗು ಜಿಲ್ಲಾ‌ ಬಿಜೆಪಿ ಸವಾಲು ಹಾಕಿದೆ.
ನಗರದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ಅವರು,ವಿಪಕ್ಷ‌ ನಾಯಕ ಹಾಗೂ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಅವರ ಹಿಂದೂ ವಿರೋಧಿ ನೀತಿ, ಕೊಡವರ ಬಗೆಗಿನ ಕೀಳು ಮಟ್ಟದ ಹೇಳಿಕೆಯನ್ನು ವಿರೋಧಿಸಿ ಅವರ ವಿರುದ್ಧ ಕಪ್ಪುಬಾವುಟ ಪ್ರದರ್ಶನದ ಮೂಲಕ ಬಿಜೆಪಿ ಪ್ರಜಾಪ್ರಭುತ್ವ ವ್ಯವಸ್ಥೆಯಡಿ ತನ್ನ ಪ್ರತಿಭಟನೆ ಸೂಚಿಸಿತ್ತು. ಆದರೆ ಮೊಟ್ಟೆ ಎಸೆದ ಪ್ರಕರಣದಲ್ಲಿ ಬಿಜೆಪಿಯ ಪಾತ್ರವಿಲ್ಲದಿದ್ದರೂ, ಅದನ್ನು ಬಿಜೆಪಿಯವರೇ ಮಾಡಿರುವುದಾಗಿ ಬಿಂಬಿಸಿ ಮಡಿಕೇರಿ ಚಲೋ ಕಾರ್ಯಕ್ರಮ ಹಮ್ಮಿಕೊಂಡಿರುವುದರ ಔಚಿತ್ಯವೇನು ಎಂದು ಪ್ರಶ್ನಿಸಿದರು.
ಮಡಿಕೇರಿಯಲ್ಲಿ ತನ್ನ ಮೇಲೆ ಮೊಟ್ಟೆ ಎಸೆಯಲಾಗಿಲ್ಲ ಎಂಬುದನ್ನು ಸ್ವತಃ ಸಿದ್ದರಾಮಯ್ಯ ಅವರೇ ಒಪ್ಪಿಕೊಂಡಿದ್ದಾರೆ. ಅಲ್ಲದೆ, ಈ ಸಂಬಂಧ ಪೊಲೀಸ್ ದೂರು ಕೂಡಾ ಸಲ್ಲಿಕೆಯಾಗಿಲ್ಲ. ಗುಡ್ಡೆಹೊಸೂರಿನಲ್ಲಿ ಮೊಟ್ಟೆ ಎಸೆದಿರುವುದು ತಾನೇ ಎಂದು ಕಾಂಗ್ರೆಸ್ ಕಾರ್ಯಕರ್ತರಾಗಿರುವ ಸಂಪತ್ ಅವರು ಒಪ್ಪಿಕೊಂಡಿದ್ದು, ಸಿದ್ದರಾಮಯ್ಯ ಅವರ ಹಿಂದೂ ವಿರೋಧಿ ನೀತಿಯ ವಿರುದ್ಧ ತಾನು ಈ ಕೃತ್ಯ ಮಾಡಿರುವುದಾಗಿಯೂ ಹೇಳಿಕೊಂಡಿದ್ದಾರೆ. ಇದು ಪೊಲೀಸ್ ಹೇಳಿಕೆಯಲ್ಲೂ ದಾಖಲಾಗಿದ್ದು, ನ್ಯಾಯಾಲಯ ಕೂಡಾ ಅವರನ್ನು ಜಾಮೀನಿನ‌ ಮೇಲೆ ಬಿಡುಗಡೆ ಮಾಡಿದೆ. ಸಂಪತ್ ಕಾಂಗ್ರೆಸ್ ಕಾರ್ಯಕರ್ತ ಎಂಬುದಕ್ಕೆ ಸೋಮವಾರಪೇಟೆ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ 11ನೇ ವಾರ್ಡ್’ನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ‌ ಸ್ಪರ್ಧಿಸಿದ್ದ ಕೆ.ಎ.ಆದಂ ಅವರ ಸೂಚಕರಾಗಿ ಮತ್ತು ಅವರ ಚುನಾವಣಾ ಬೂತ್ ಏಜೆಂಟರಾಗಿ ಕಾರ್ಯನಿರ್ವಹಿಸಿರುವುದಕ್ಕೆ ಸರಕಾರದ ದಾಖಲೆಗಳೇ ಇವೆ.ಹೀಗಿದ್ದರೂ ಆತ ನಮ್ಮ ಕಾರ್ಯಕರ್ತನಲ್ಲ. ಬಿಜೆಪಿ ಕಾರ್ಯಕರ್ತ ಎಂದು ಸುಳ್ಳು ಹೇಳಿಕೊಂಡು‌ ಕೊಡಗಿನ ಜನರನ್ನು ಹಾದಿತಪ್ಪಿಸುತ್ತಿರುವುದೇಕೆ ಎಂದು ರಾಬಿನ್ ದೇವಯ್ಯ ಕಾಂಗ್ರೆಸ್ಸಿಗರನ್ನು ಪ್ರಶ್ನಿಸಿದರು.
ಶಾಸಕರಾಗಿರುವ ಅಪ್ಪಚ್ಚುರಂಜನ್ ಅವರೊಂದಿಗೆ ಹಲವು ಸಂದರ್ಭಗಳಲ್ಲಿ ಅನೇಕರು ಫೋಟೋ ತೆಗೆಸಿಕೊಳ್ಳುತ್ತಾರೆ. ಅಂದ ಮಾತ್ರಕ್ಕೆ ಅವರೆಲ್ಲರೂ ಬಿಜೆಪಿಯವರೆನ್ನಲು ಸಾಧ್ಯವಿಲ್ಲ.ಸಂಪತ್ ಅವರು ಹಿಂದೆ ಆರ್.ಎಸ್.ಎಸ್.ಕಾರ್ಯಕರ್ತರಾಗಿದ್ದು, ಆರ್.ಎಸ್.ಎಸ್. ಸ್ವಯಂಸೇವಕರಲ್ಲರೂ ಬಿಜೆಪಿ ಕಾರ್ಯಕರ್ತರೇ ಆಗಿರಬೇಕೆಂಬ ನಿಯಮವಿಲ್ಲ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಯಾವುದೇ ಪಕ್ಷದ ಕಾರ್ಯಕರ್ತರಾಗಿದ್ದರೂ ಕೇಸರಿ ಶಾಲು ಹಾಕಿಕೊಳ್ಳುವುದು ಸಾಮಾನ್ಯ. ಆದರೆ ಅದನ್ನೇ ಸಾಕ್ಷಿಯಾಗಿಟ್ಟುಕೊಂಡು ಅವರನ್ನು ಬಿಜೆಪಿಯವರೆಂದು ಹೇಳಲು ಬರುವುದಿಲ್ಲ ಎಂದೂ ರಾಬಿನ್ ದೇವಯ್ಯ ಸ್ಪಷ್ಟಪಡಿಸಿದರಲ್ಲದೆ, ಮೊಟ್ಟೆ ಎಸೆದ ಪ್ರಕರಣ ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ತಾನೇ ಸೃಷ್ಟಿಸಿರುವ ಪ್ರಕರಣವೆಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಹೇಳಿದರು.
ಸಿದ್ದರಾಮಯ್ಯ ಅವರ ಕೊಡಗು ಭೇಟಿ ಸಂದರ್ಭದಲ್ಲಿನ ಘಟನೆಗಳು ಹಾಗೂ ಅವರ ಕೆಲವು ಹೇಳಿಕೆಗಳ ಬಗ್ಗೆ ಕೊಡಗಿನ ಕಾಂಗ್ರೆಸ್’ಗೆ ಕೆಲವು ಪ್ರಶ್ನೆಗಳನ್ನು ಕೇಳಲೇಬೇಕಾದ ಅನಿವಾರ್ಯತೆ ಬಂದಿದೆ ಎಂದ ರಾಬಿನ್ ದೇವಯ್ಯ ಅವರು, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗೋಹತ್ಯೆ ನಿಷೇಧ ಮತ್ತು ಮತಾಂತರ ನಿಷೇಧ ಕಾಯ್ದೆಯನ್ನು ರದ್ದುಪಡಿಸುವುದಾಗಿ ಹಾಗೂ ಟಿಪ್ಪು ಜಯಂತಿಯನ್ನು ಮತ್ತೆ ಆಚರಿಸುವುದಾಗಿ ಸಿದ್ದರಾಮಯ್ಯ ಹೇಳಿದ್ದು, ಇದರ ಬಗ್ಗೆ ಕೊಡಗಿನ ಕಾಂಗ್ರೆಸ್ಸ್’ನ ನಿಲುವೇನು ಎಂದು ಪ್ರಶ್ನಿಸಿದರು.
ಹಿಂದೆ ಪ್ರತಿಭಟನೆಯೊಂದರಲ್ಲಿ ಎ.ಕೆ.ಸುಬ್ಬಯ್ಯ ಅವರು ಗೋಮಾಂಸ ತಿಂದಿದ್ದರೆಂಬ ಕಾರಣಕ್ಕೆ ‘ಕೊಡವರೆಲ್ಲರೂ ಗೋಮಾಂಸ ಭಕ್ಷಕರು’ ಎಂಬ ಸಿದ್ದರಾಮಯ್ಯನವರ ಹೇಳಿಕೆಯನ್ನು ಸುಬ್ಬಯ್ಯ ಅವರ ಪುತ್ರರಾಗಿರುವ ಎ.ಎಸ್. ಪೊನ್ನಣ್ಣ ಅವರಾದಿಯಾಗಿ ಕೊಡಗಿನ ಕಾಂಗ್ರೆಸ್ಸಿಗರು ಒಪ್ಪಿಕೊಳ್ಳುವಿರಾ ಎಂದೂ ಅವರು ಕುಟುಕಿದರು.
ಅಂದು ಮಡಿಕೇರಿಯಲ್ಲಿ ಮಾಂಸಾಹಾರ ಮಾಡಿ ಕೊಡ್ಲಿಪೇಟೆಯ ಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿರುವುದನ್ನು ಸ್ವತಃ ಸಿದ್ದರಾಮಯ್ಯ ಅವರೇ ಒಪ್ಪಿಕೊಂಡಿದ್ದಾರೆ. ಆದರೆ ಅಂದು ಅವರು ಮಾಂಸಾಹಾರ‌ ಸೇವಿಸಿರಲಿಲ್ಲ ಎಂದು ವೀಣಾ ಅಚ್ಚಯ್ಯ‌ ಹೇಳಿರುವುದು ಅಚ್ಚರಿ ಮೂಡಿಸಿದೆ. ಅಲ್ಲದೆ ಮಾಂಸಾಹಾರ ಸೇವಿಸಿ ಹಿಂದೂಗಳ ಶ್ರದ್ಧಾಕೇಂದ್ರ ಅದರಲ್ಲೂ ವೀರಶೈವ ಸಮಾಜದವರ ದೇವಾಲಯವನ್ನು ಅಪವಿತ್ರ ಮಾಡಿರುವುದರ ಬಗ್ಗೆ ಕಾಂಗ್ರೆಸ್ ಮುಖಂಡರಾಗಿರುವ ಚಂದ್ರಮೌಳಿಯವರ ನಿಲುವೇನು ಎಂದು ಪ್ರಶ್ನಿಸಿದ ರಾಬಿನ್ ದೇವಯ್ಯ ಅವರು, ನಿಮಗೆ ಆರಾಧ್ಯ ದೈವ ಬಸವೇಶ್ವರ ಮುಖ್ಯವೋ, ಸಿದ್ದರಾಮಯ್ಯ ಮುಖ್ಯವೋ ಎಂಬುದನ್ನು ಸ್ಪಷ್ಟಪಡಿಸಿ ಎಂದೂ ಸವಾಲೆಸೆದರು.
ಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ‌ ಉಪಾಧ್ಯಕ್ಷ ಬಿ.ಕೆ.ಅರುಣ್ ಕುಮಾರ್, ವಕ್ತಾರ ಮಹೇಶ್ ಜೈನಿ, ಕಾರ್ಯದರ್ಶಿ ಹೆಚ್.ಸಿ.ಸತೀಶ್,ನಗರಾಧ್ಯಕ್ಷ ಮನು ಮಂಜುನಾಥ್, ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!