ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಮುಂದುವರಿದಿದ್ದು, ಇಲ್ಲಿನ ಬಿಷ್ಣುಪುರ ಜಿಲ್ಲೆಯ ಕಾಂಗ್ವೈ ಮತ್ತು ಫೌಗಕ್ಚಾವೊ ಪ್ರದೇಶದಲ್ಲಿ ಗುರುವಾರ ಸೇನೆ ಮತ್ತು ಆರ್ಎಎಫ್ (ರಾಯಲ್ ಏರ್ ಫೋರ್ಸ್) ಸಿಬ್ಬಂದಿ ಇಬ್ಬರೂ ಅಶ್ರುವಾಯು ಪ್ರಯೋಗಿಸಿದ್ದ ಪರಿಣಾಮವಾಗಿ ಹದಿನೇಳು ಜನರು ಗಾಯಗೊಂಡಿದ್ದಾರೆ.
ಇಡೀ ಇಂಫಾಲ್ ಕಣಿವೆಯಲ್ಲಿ ಮತ್ತೆ ಕರ್ಫ್ಯೂ ವಿಧಿಸಲಾಗಿದೆ.
ಘರ್ಷಣೆಗೂ ಮೊದಲು ಗುರುವಾರ ಬೆಳಿಗ್ಗೆ ರಾಜ್ಯ ಹೈಕೋರ್ಟ್ ಚುರಾಚಂದ್ಪುರ ಜಿಲ್ಲೆಯ ಉದ್ದೇಶಿತ ಸಮಾಧಿ ಸ್ಥಳದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಿದ ನಂತರ ಮಣಿಪುರದ ಜನಾಂಗೀಯ ಹಿಂಸಾಚಾರದಲ್ಲಿ ಸಾವಿಗೀಡಾದ ಕುಕಿ-ಜೋಮಿ ಜನರ ಸಾಮೂಹಿಕ ಸಮಾಧಿ ಕಾರ್ಯ ಸ್ಥಗಿತಗೊಂಡಿತು. ಅಪೆಕ್ಸ್ ಬುಡಕಟ್ಟು ಸಂಸ್ಥೆಯಾದ ಐಟಿಎಲ್ಎಫ್, ಬಿಷ್ಣುಪುರದ ಗಡಿಯಲ್ಲಿರುವ ಚುರಾಚಂದ್ಪುರ ಜಿಲ್ಲೆಯ ಹಾವೊಲೈ ಖೋಪಿ ಗ್ರಾಮದ ಸ್ಥಳದಲ್ಲಿ 35 ಜನರ ಸಾಮೂಹಿಕ ಸಮಾಧಿ ಕಾರ್ಯವನ್ನು ಮುಂದೂಡುತ್ತಿರುವುದಾಗಿ ಹೇಳಿದೆ.
ಇತ್ತ ಭದ್ರತಾ ಪಡೆಗಳ ಚಲನವಲನವನ್ನು ತಡೆಯಲು ಸಾವಿರಾರು ಸ್ಥಳೀಯರು ಬೀದಿಗಿಳಿದಿದ್ದರಿಂದ ಬಿಷ್ಣುಪುರ ಜಿಲ್ಲೆಯಲ್ಲಿ ಬೆಳಿಗ್ಗೆಯಿಂದ ಉದ್ವಿಗ್ನತೆ ಉಂಟಾಗಿದೆ. ಮಹಿಳೆಯರ ನೇತೃತ್ವದಲ್ಲಿ ಸ್ಥಳೀಯರು ಸೇನೆ ಮತ್ತು ಆರ್ಎಎಫ್ ಸಿಬ್ಬಂದಿ ಹಾಕಿದ್ದ ಬ್ಯಾರಿಕೇಡ್ ಅನ್ನು ದಾಟಲು ಪ್ರಯತ್ನಿಸಿದರು. ಸಾಮೂಹಿಕ ಸಮಾಧಿ ಸ್ಥಳವಾದ ಟುಯಿಬುಂಗ್ಗೆ ಹೋಗಲು ಅವಕಾಶ ನೀಡಬೇಕೆಂದು ಒತ್ತಾಯಿಸಿದರು.
ಈ ವೆಲ್ ಮುಂಜಾಗ್ರತಾ ಕ್ರಮವಾಗಿ ಸರ್ಕಾರ ಇಂಫಾಲ ಪೂರ್ವ ಮತ್ತು ಪಶ್ಚಿಮ ಜಿಲ್ಲೆಗಳಲ್ಲಿ ಕರ್ಫ್ಯೂ ಸಡಿಲಿಕೆಯನ್ನು ಹಿಂತೆಗೆದುಕೊಂಡಿದೆ. ಇಂಫಾಲ ಪೂರ್ವ ಮತ್ತು ಪಶ್ಚಿಮದ ಜಿಲ್ಲಾ ಮ್ಯಾಜಿಸ್ಟ್ರೇಟ್ಗಳು ಕರ್ಫ್ಯೂವನ್ನು ಪುನಃ ವಿಧಿಸಲು ಪ್ರತ್ಯೇಕ ಆದೇಶಗಳನ್ನು ಹೊರಡಿಸಿದ್ದಾರೆ.