ದಿಗಂತ ವರದಿ ಹಾವೇರಿ:
ಜಿಲ್ಲೆಯ ಹಿರೇಕೆರೂರ ತಾಲೂಕಿನ ದೂದಿಹಳ್ಳಿ ಗ್ರಾಮದ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿನಿಯೊಬ್ಬಳು ಶಾಲೆಯ ಹಿಂದಿ ಶಿಕ್ಷಕನ ಪತ್ನಿಯ ಕಿರುಕುಳಕ್ಕೆ ಬೇಸತ್ತು ಮನೆಯಲ್ಲಿ ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮೃತ ಬಾಲಕಿಯನ್ನು 9ನೇ ತರಗತಿಯಲ್ಲಿ ಓದುತ್ತಿದ್ದ ಅರ್ಚನಾ ಗೌಡಣ್ಣನವರ ಎಂದು ಗುರುತಿಸಲಾಗಿದ್ದು, ಈ ಘಟನೆ ಜು.2ರಂದು ಜರುಗಿದ್ದು, ಬಾಲಕಿಯ ಡೆತ್ ನೋಟ್ ವೈರಲ್ ಆದ ಹಿನ್ನೆಲೆಯಲ್ಲಿ ಈಗ ಬೆಳಕಿಗೆ ಬಂದಿದೆ.
ಬಾಲಕಿ ಜು.2ರಂದು ಮೃತಪಟ್ಟಿದ್ದು, ಅದೇ ದಿನವೇ ಅವಳ ಕುಟುಂಬಸ್ಥರು ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ನಂತರ ಅವಳ ಡೆತ್ ನೋಟ್ ಸಿಕ್ಕಿದ್ದು, ಅದನ್ನು ಆಧರಿಸಿ ಶಾಲೆಯಲ್ಲಿ ಈ ಕುರಿತು ಮಾತುಕತೆ ನಡೆದಿದೆ. ಆಗ ಬಾಲಕಿ ಕುಟುಂಬಕ್ಕೆ ಹಿಂದಿ ಶಿಕ್ಷಕ ರೂ.1ಲಕ್ಷ ಹಣವನ್ನು ನೀಡಿ ಪ್ರಕರಣ ತಣ್ಣಗಾಗಿಸುವ ಪ್ರಯತ್ನ ನಡೆಸಿದ್ದರು ಎನ್ನಲಾಗಿದೆ.
ಡೆತ್ ನೋಟ್ ನಲ್ಲಿ ತನ್ನ ಕುಟುಂಬ ಸದಸ್ಯರ ಬಗ್ಗೆ ಬರೆದಿರುವ ಬಾಲಕಿ, ಕೊನೆಯಲ್ಲಿ ಮಾತ್ರ ತನ್ನ ನೋವನ್ನು ಹೊರಹಾಕಿದ್ದಾಳೆ. ಕೊನೆಯ ಸಾಲಿನಲ್ಲಿ, ‘ಜೋಯಾ ನಾ ನಿನ್ನ ಬಿಡಲ್ಲ, ನೀನು ನಿನ್ನ ಮಮ್ಮಿ ಕೊಟ್ಟ ಕಷ್ಟಕ್ಕೆ ಬೆಲೆ ತೆರಬೇಕು’ ಎಂದು ಬರೆದಿರುವುದು ಇದೀಗ ಹೆಚ್ಚು ಚರ್ಚೆಗೆ ಒಳಗಾಗುತ್ತಿದೆ. ಜೋಯಾ ಅರ್ಚನಾ ಕ್ಲಾಸ್‌ಮೇಟ್ ಇರಬಹುದು, ಆಕೆಯ ತಂದೆಯೇ ಹಿಂದಿ ಟೀಚರ್ ಇರಬಹುದು ಎಂದು ಹೇಳಲಾಗಿದೆ.
ಈ ಘಟನೆ ಕುರಿತು ಯಾವುದೇ ಪ್ರಕರಣ ಕೂಡ ದಾಖಲಾಗಿಲ್ಲ.