ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಾಲೆಯಲ್ಲಿ ವಿದ್ಯಾರ್ಥಿಯೊಬ್ಬ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಲಖನೌ ನಲ್ಲಿ ನಡೆದಿದೆ.
9ನೇ ತರಗತಿ ವಿದ್ಯಾರ್ಥಿ ಅತೀಫ್ ಸಿದ್ದಿಕಿ ಮೃತ ಬಾಲಕ. ಅಲಿಗಂಜ್ ವಿಭಾಗದ ಮಾಂಟೆಸ್ಸೊರಿ ಶಾಲೆಯ ತರಗತಿಯಲ್ಲಿ ಪಾಠ ನಡೆಯುವ ವೇಳೆ ವಿದ್ಯಾರ್ಥಿಯು ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾನೆ. ತಕ್ಷಣವೇ ಆತನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆತ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.
ವಿದ್ಯಾರ್ಥಿಗೆ ಹೃದಯಾಘಾತ ಸಂಭವಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಆದರೆ ಮರಣೋತ್ತರ ಪರೀಕ್ಷೆಯ ನಂತರವೇ ಸ್ಪಷ್ಟವಾದ ಮಾಹಿತಿ ದೊರೆಯಲಿದೆ. ಇತ್ತೀಚಿಗೆ ಮಕ್ಕಳಲ್ಲಿ ಹೃದಯಾಘಾತ ಹೆಚ್ಚು ಕಂಡುಬರುತ್ತಿರುವುದು ಆತಂಕಕ್ಕೆ ಎಡೆಮಾಡಿದೆ.