ಐ.ಬಿ. ಸಂದೀಪ್ ಕುಮಾರ್
ಹೊಸದಿಗಂತ ವರದಿ ಪುತ್ತೂರು:
ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ತತ್ವಾರ ಆಗಬಾರದು ಮತ್ತು ಶುದ್ಧ ನೀರು ಪೂರೈಕೆ ಮಾಡಬೇಕೆಂಬ ಸದುದ್ದೇಶದಿಂದ ಆರಂಭಿಸಲಾದ `ವಾಟರ್ ವೆಂಡಿಂಗ್ ಮೆಷಿನ್’ ಅಥವಾ ವಾಟರ್ ಎಟಿಎಂ ಬೂತ್‍ಗಳು ಗ್ರಾಮೀಣ ಜನರ ನಿರೀಕ್ಷಿತ ಸ್ಪಂದನೆ ಇಲ್ಲದೆ ವೈಫಲ್ಯವನ್ನು ಕಂಡಿದೆ.
ಆರಂಭದಲ್ಲಿ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಯಮಿತವು ರಾಜ್ಯಾದ್ಯಂತ ಗ್ರಾಮೀಣ ಪ್ರದೇಶಗಳಲ್ಲಿ `ವಾಟರ್ ವೆಂಡಿಂಗ್ ಮೆಷಿನ್’ಗಳನ್ನು ಅನುಷ್ಠಾನಗೊಳಿಸಿತ್ತು. ಬಳಿಕ ಇದರ ನಿರ್ವಹಣೆ ಅನುಷ್ಠಾನದ ಹೊಣೆಯನ್ನು ಕರ್ನಾಟಕ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗಕ್ಕೆ ವಿಸ್ತರಿಸಲಾಯಿತು.
ಆರಂಭದ ದಿನಗಳಲ್ಲಿ ಉತ್ಸಾಹ
ಎಚ್.ಕೆ. ಪಾಟೀಲ್ ಅವರು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಖಾತೆ ಸಚಿವರಾಗಿದ್ದ ಸಂದರ್ಭ ರಾಜ್ಯದ ಒಟ್ಟು 31 ಜಿಲ್ಲೆಗಳಲ್ಲಿ `ವಾಟರ್ ವೆಂಡಿಂಗ್ ಮೆಷಿನ್’ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿತ್ತು. ಕ್ರಮೇಣ `ವಾಟರ್ ವೆಂಡಿಂಗ್ ಮೆಷಿನ್’ ನಿರ್ವಹಣೆಯ ಜವಾಬ್ದಾರಿಯನ್ನು ಆಯಾ ಜಿಲ್ಲೆಗಳ ಗ್ರಾಮ ಪಂಚಾಯತ್‍ಗಳಿಗೆ ವಹಿಸಿಕೊಡಲಾಗಿತ್ತು. ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ತತ್ವಾರ ಆಗಬಾರದು ಮತ್ತು ಶುದ್ಧ ನೀರು ಪೂರೈಕೆ ಮಾಡಬೇಕೆಂಬ ಮಹತ್ವಾಕಾಂಕ್ಷೆಯಿಂದ ಆರಂಭಿಸಲಾದ `ವಾಟರ್ ವೆಂಡಿಂಗ್ ಮೆಷಿನ್’ ಯೋಜನೆ ಪ್ರಾರಂಭದ ದಿನಗಳಲ್ಲಿ ಜನಪ್ರಿಯತೆಯನ್ನು ಗಳಿಸಿತ್ತು. ಅನೇಕ ಗ್ರಾಮ ಪಂಚಾಯತ್‍ಗಳು ಇವುಗಳನ್ನು ಅನುಷ್ಠಾನಗೊಳಿಸಲು ಉತ್ಸುಕವಾಗಿತ್ತು.
ಬಾವಿ ನೀರಿನ ರುಚಿಯೇ ಮೇಲು
ಆರಂಭದ ದಿನಗಳಲ್ಲಿ ರೂ.1 ನಾಣ್ಯವನ್ನು ಯಂತ್ರದೊಳಗೆ ಹಾಕಿದಾಗ 5 ಲೀಟರ್ ಶುದ್ಧ ಕುಡಿಯುವ ನೀರು ಲಭಿಸುತ್ತಿತ್ತು. ಅನೇಕ ಕಡೆಗಳಲ್ಲಿ ಕೊಳವೆಬಾವಿಗಳಿಂದ, ಇನ್ನು ಕೆಲವೆಡೆ ತೆರೆದ ಬಾವಿಗಳಿಂದ `ವಾಟರ್ ವೆಂಡಿಂಗ್ ಮೆಷಿನ್’ಗೆ ನೀರನ್ನು ಪೂರೈಸಲಾಗುತ್ತಿತ್ತು. ಕುಡಿಯುವ ನೀರಿನ ತೀವ್ರ ಅಭಾವ ಇರುವಂತಹ ಗ್ರಾಮಗಳಲ್ಲಿ ಇದು ಯಶಸ್ಸನ್ನು ಕಂಡಿತು. ಆದರೆ, ಬಾವಿ ನೀರಿನ ರುಚಿಗೆ ಒಗ್ಗಿ ಹೋಗಿರುವ ಮಂದಿಗೆ ಈ ಯಂತ್ರದ ನೀರು ರುಚಿಸಲಿಲ್ಲ. ಮಾತ್ರವಲ್ಲದೆ, ಜನ ವಸತಿ ಇಲ್ಲದೆ ಪ್ರದೇಶಗಳಲ್ಲಿ, ಜನರು ಸಲೀಸಾಗಿ ಓಡಾಟ ನಡೆಸಲಾಗದಂತಹ ಸ್ಥಳಗಳಲ್ಲಿ `ವಾಟರ್ ವೆಂಡಿಂಗ್ ಮೆಷಿನ್’ ಅನುಷ್ಠಾನಗೊಳಸಿದ ಪರಿಣಾಮವಾಗಿ ಇದು ಪ್ರಾಮುಖ್ಯತೆಯನ್ನು ಕಳೆದುಕೊಂಡಿತು. ಇದರಿಂದಾಗಿ ಬಹುತೇಕ `ವಾಟರ್ ವೆಂಡಿಂಗ್ ಮೆಷಿನ್’ಗಳು ಇದೀಗ ಅನಾಥವಾಗಿಬಿಟ್ಟಿದೆ.
ತುಕ್ಕು ಹಿಡಿದ ಯಂತ್ರಗಳು
ಸರಕಾರದಿಂದ ಜಿಲ್ಲಾ ಪಂಚಾಯತ್‍ಗಳಲ್ಲಿರುವ ಕರ್ನಾಟಕ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಮೂಲಕ ಗ್ರಾಮ ಪಂಚಾಯತ್‍ಗಳಿಗೆ `ವಾಟರ್ ವೆಂಡಿಂಗ್ ಮೆಷಿನ್’ಗಳ ನಿರ್ವಹಣೆಗಾಗಿ ಪ್ರತೀ ತಿಂಗಳು ತಲಾ ರೂ.3 ಸಾವಿರದಂತೆ ನಿರ್ವಹಣಾ ಮೊತ್ತವನ್ನು ಒದಗಿಸಲಾಗುತ್ತಿದೆ. ಆದರೆ, ಅನೇಕ ಗ್ರಾಮ ಪಂಚಾಯತ್‍ಗಳ ಇವುಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡದೆ ಯಂತ್ರಗಳು ತುಕ್ಕು ಹಿಡಿಯುತ್ತಿದೆ. ಕೆಲವು ಗ್ರಾಮ ಪಂಚಾಯತ್‍ಗಳು ಸಂಬಂಧಪಟ್ಟ ಇಲಾಖೆಯ ಅನುಮತಿಯೊಂದಿಗೆ ಬೇಡಿಕೆ ಇರುವ ಕಡೆಗಳಿಗೆ ಸ್ಥಳಾಂತರಗೊಳಿಸಿದೆ. ಆದರೆ, ರಾಜ್ಯದಲ್ಲಿ ಎಷ್ಟು `ವಾಟರ್ ವೆಂಡಿಂಗ್ ಮೆಷಿನ್’ಗಳನ್ನು ಅನುಷ್ಠಾನಗೊಳಿಸಲಾಗಿದೆ ಎಂಬ ಅಂಕಿ ಅಂಶಗಳು ಲಭ್ಯವಾಗುತ್ತಿಲ್ಲ…!
ಪುನಶ್ಚೇತನ ಕಾರ್ಯ ಆಗಬೇಕಿದೆ
ಆರಂಭದ ದಿನಗಳಲ್ಲಿ ಒಂದು ರೂಪಾಯಿಗೆ 5 ಲೀ. ನೀರು ಸಿಗುತ್ತಿದ್ದರೆ ಇಂದು ಈ ಮೊತ್ತವನ್ನು ರೂ.5ಕ್ಕೇರಿಸಲಾಗಿದೆ. ಆದರೂ ಇವುಗಳಿಗೆ ಉತ್ತಮ ಸ್ಪಂದನೆ ಸಿಗುತ್ತಿದೆ. ರಾಜ್ಯದೆಲ್ಲೆಡೆ ಕೆಟ್ಟು ಹೋಗಿರುವ ಮತ್ತು ನಿರ್ವಹಣೆಯಲ್ಲದೆ ನಿರ್ಲಕ್ಷ್ಯಕ್ಕೊಳಗಾಗಿರುವ `ವಾಟರ್ ವೆಂಡಿಂಗ್ ಮೆಷಿನ್’ಗಳಿಗೆ ಪುನಶ್ಚೇತನ ನೀಡುವ ಕಾರ್ಯ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಖಾತೆ ಸಚಿವರು ಯೋಜನೆಗಳನ್ನು ಹಾಕಿಕೊಳ್ಳಲು ಮುಂದಾಗಿದ್ದಾರೆ ಎಂದು ದ.ಕ. ಜಿ.ಪಂಚಾಯತಿಯ ಆರ್‍ಡಿಡಬ್ಲ್ಯುಎಸ್‍ಡಿ ರಘುನಾಥ್ ಎನ್.ಡಿ ಮಾಹಿತಿ ನೀಡಿದ್ದಾರೆ.
127 ವಾಟರ್ ವೆಂಡಿಂಗ್ ಮೆಷಿನ್‌ಗಳು
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 127 ಕಾರ್ಯ ನಿರ್ವಹಿಸುತ್ತಿರುವ ಮತ್ತು ಮುಚ್ಚಲಾಗಿರುವ `ವಾಟರ್ ವೆಂಡಿಂಗ್ ಮೆಷಿನ್’ಗಳಿವೆ. ಇವುಗಳ ಪೈಕಿ ಕಾರ್ಯ ನಿರ್ವಹಿಸುತ್ತಿರುವ ಘಟಕಗಳಿಗೆ ಮಾಸಿಕ ರೂ.3 ಸಾವಿರದಂತೆ 2020-21ನೇ ಸಾಲಿನಲ್ಲಿ ರೂ.17.91 ಲಕ್ಷ ಮತ್ತು 2024-25ನೇ ಸಾಲಿನಲ್ಲಿ ರೂ.47.87 ಲಕ್ಷ ಮೊತ್ತವನ್ನು ನಿರ್ವಹಣೆಗಾಗಿ ಒದಗಿಸಲಾಗಿದೆ.