ಸ್ವಚ್ಛ ಭಾರತ ಅಭಿಯಾನ ಯಶೋಗಾಥೆ: ದೇಶಾದ್ಯಂತ ಸುದ್ದಿಯಾಯ್ತು ನಿಟ್ಟೆ ಎಂಆರ್‌ಎಫ್ ಘಟಕದ ಸೇವೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದಲ್ಲಿ ಗ್ರಾಮೀಣ ಭಾಗದಲ್ಲೇ ಮೊದಲು ಸ್ಥಾಪನೆಯಾದ ಉಡುಪಿ ಜಿಲ್ಲೆಯ ನಿಟ್ಟೆ ಎಂಆರ್‌ಎಫ್ (ಮೆಟೀರಿಯಲ್ಸ್ ರಿಕವರಿ ಫೆಸಿಲಿಟಿ) ಘಟಕ ಈಗ ದಿಲ್ಲಿಯವರೆಗೂ ಸುದ್ದಿಯಾಗಿದೆ. ಕೇಂದ್ರ ಜಲಶಕ್ತಿ ಸಚಿವಾಲಯವು ಈ ಯಶೋಗಾಥೆಯನ್ನು ಪ್ರಕಟಿಸಿದೆ.

ನಿಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಈ ಎಂಆರ್‌ಎಫ್ ಘಟಕವು ಕಳೆದ ಆಗಸ್ಟ್ 1ರಿಂದ ಕಾರ್ಯಾರಂಭ ಮಾಡಿದೆ. ಈ ಕೇಂದ್ರದಿಂದ ಕಾರ್ಕಳ, ಉಡುಪಿ, ಕಾಪು ಮತ್ತು ಹೆಬ್ರಿಯ ತಾಲೂಕುಗಳ 41 ಗ್ರಾ.ಪಂ.ಗಳಲ್ಲಿ ಪರಿಣಾಮಕಾರಿಯಾಗಿ ತ್ಯಾಜ್ಯ ನಿರ್ವಹಣೆ ಸೇವೆ ಒದಗಿಸಲಾಗುತ್ತಿದೆ.

ಉಡುಪಿ ಜಿ.ಪಂ.ನಿಂದ ಈ ಕಾರ್ಯಕ್ರಮದ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಸಾಹಸ್ ಝೀರೋ ವೇಸ್ಟ್ ಪ್ರೈ.ಲಿ. ಯೋಜನೆಯ ಅನುಷ್ಠಾನಕ್ಕೆ ತಾಂತ್ರಿಕ ಮಾರ್ಗದರ್ಶನ ನೀಡಿದರೆ, ಸೌಲಭ್ಯದ ಕಾರ್ಯಾಚರಣೆಯನ್ನು ಮಂಗಳೂರಿನ ಮಂಗಳಾ ರಿಸೋರ್ಸ್ ಮ್ಯಾನೇಜ್‌ಮೆಂಟ್ ಪ್ರೈವೇಟ್ ಸಂಸ್ಥೆ ನಿರ್ವಹಣೆ ಮಾಡುತ್ತಿದೆ.
ಈ ಘಟಕದ ಕಾರ್ಯನಿರ್ವಹಣೆ ಬಗ್ಗೆ ಹೊಸ ದಿಗಂತ ಡಿಜಿಟಲ್ ಈ ಹಿಂದೆ ಮಾಡಿದ್ದ ವಿಡಿಯೊ ವರದಿ ಗಮನಿಸಬಹುದು.

 

ಪ್ರತ್ಯೇಕ ಖಾತೆ ನಿರ್ವಹಣೆ
ಸ್ವಚ್ಛ ಭಾರತ ಅಭಿಯಾನ (ಗ್ರಾಮೀಣ)ದಡಿ ಈ ಯೋಜನೆಗೆ ₹ 2.5 ಕೋಟಿ ಬಳಕೆ ಮಾಡಲಾಗಿದೆ. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ₹ 8.32 ಲಕ್ಷ, 15ನೇ ಹಣಕಾಸು ಯೋಜನೆಯಡಿ ₹ 28.35 ಲಕ್ಷ, ಗ್ರಾಮ ವಿಕಾಸ್ ನಿಧಿಯಿಂದ ₹ 10 ಲಕ್ಷ, ನಿಟ್ಟೆ ಪಂಚಾಯತ್‌ನ ಸ್ವಯಂ ನಿಧಿಯಿಂದ ₹ 23 ಲಕ್ಷ ಒದಗಿಸಲಾಗಿದೆ. ನಿಟ್ಟೆ ಗ್ರಾ.ಪಂ.ನಲ್ಲಿ ಎಂಆರ್‌ಎಫ್ ಗಾಗಿ ಪ್ರತ್ಯೇಕ ಬ್ಯಾಂಕ್ ಖಾತೆಯನ್ನು ನಿರ್ವಹಣೆ ಮಾಡಲಾಗುತ್ತಿದೆ. ಈ ಖಾತೆಗೆ ಅಧ್ಯಕ್ಷರು ಅಥವಾ ಸದಸ್ಯ ಕಾರ್ಯದರ್ಶಿ ಸಹಿ ಹಾಕುವ ಅಧಿಕಾರ ಹೊಂದಿದ್ದಾರೆ. ಸರಕುಪಟ್ಟಿ ಸ್ವೀಕರಿಸಿದ 7 ದಿನಗಳ ಒಳಗಾಗಿ ಈ ಜಂಟಿ ಸಮಿತಿಯ ಬ್ಯಾಂಕ್ ಖಾತೆಗೆ ಗ್ರಾ.ಪಂ.ಗಳು ಸೇವಾ ಶುಲ್ಕ ಜಮಾ ಮಾಡಬೇಕಾಗುತ್ತದೆ.

ನಿಟ್ಟೆ ಎಂಆರ್‌ಎಫ್ ಘಟಕದ ಯಶಸ್ಸಿನ ನಂತರ ಉಡುಪಿ ಜಿಲ್ಲೆಯ ಇನ್ನೂ ನಾಲ್ಕು ಕಡೆಗಳಲ್ಲಿ ಎಂಆರ್‌ಎಫ್ ಘಟಕ ಸ್ಥಾಪನೆಗೆ ಯೋಜನೆ ರೂಪಿಸಲಾಗಿದೆ. ಅದರಂತೆ ಬಡಗಬೆಟ್ಟು, ಕೆದೂರು, ತ್ರಾಸಿ ಮತ್ತು ಹೆಬ್ರಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ಘಟಕಗಳನ್ನು ಸ್ಥಾಪನೆಯಾಗಲಿದೆ. ಇದರಿಂದ ಜಿಲ್ಲೆಯ ಎಲ್ಲ 155 ಗ್ರಾ.ಪಂ.ಗಳಿಗೆ ನೆರವಾಗಲಿದೆ.

ಗ್ರಾಮ ಪಂಚಾಯತ್‌ಗಳ ಪಾತ್ರ:

* ಮನೆಗಳು, ವಾಣಿಜ್ಯ ಸಂಸ್ಥೆಗಳು ಮತ್ತು ಇತರ ತ್ಯಾಜ್ಯ ಉತ್ಪಾದಕರಿಗೆ ತಮ್ಮ ಸ್ವಂತ ವೆಚ್ಚದಲ್ಲಿ ತ್ಯಾಜ್ಯ ವಿಂಗಡಣೆ ಮತ್ತು ಸಂಗ್ರಹಣೆಯ ಕಾರ್ಯವಿಧಾನದ ಬಗ್ಗೆ ತಿಳಿಸಬೇಕು.

* ದ್ರವ ತ್ಯಾಜ್ಯ ಮತ್ತು ಅಪಾಯಕಾರಿ ತ್ಯಾಜ್ಯ ವಿಂಗಡಣೆಯನ್ನು ಪಂಚಾಯತ್ ಮಟ್ಟದಲ್ಲಿ ಮನೆಗಳಲ್ಲಿಯೇ ಮಾಡಬೇಕು.

* ತಮ್ಮ ವ್ಯಾಪ್ತಿಯೊಳಗೆ ಸಂಗ್ರಹಿಸಿದ ತ್ಯಾಜ್ಯವನ್ನು ಪ್ರತ್ಯೇಕಿಸಿ ಒಣ ಘಟಕಗಳಲ್ಲಿ ಸಂಗ್ರಹಿಸಿ, ಒಣ ತ್ಯಾಜ್ಯ ವಾಸನೆ ಇಲ್ಲದಂತೆ ನೋಡಿಕೊಳ್ಳುವುದು ಮತ್ತು ಅದನ್ನು ಎಂಆರ್‌ಎಫ್ ವಾಹನಕ್ಕೆ ತಲುಪಿಸಬೇಕು.

* ಪಂಚಾಯತ್ ಮಟ್ಟದಲ್ಲಿ ಸಂಗ್ರಹಿಸುವ ತ್ಯಾಜ್ಯವನ್ನು ಚೀಲಗಳಲ್ಲಿ ಪ್ಯಾಕ್ ಮಾಡಬೇಕು.

* ತ್ಯಾಜ್ಯ ಸುರಿಯುವುದನ್ನು ತಪ್ಪಿಸಲು ತ್ಯಾಜ್ಯ ಸಾಗಿಸುವ ವಾಹನ ಲಭ್ಯವಿರಬೇಕು.

* ಪಂಚಾಯತ್‌ನಿಂದ ಎಂಆರ್‌ಎಫ್ ಗಾಗಿ ಬೃಹತ್ ಪ್ರಮಾಣದ ತ್ಯಾಜ್ಯ ಸಂಗ್ರಹಿಸಲು ಬಯಸಿದರೆ 2 ದಿನ ಮುಂಚಿತವಾಗಿ ಎಂಆರ್‌ಎಫ್ ಆಪರೇಟರ್‌ಗೆ ಮಾಹಿತಿ ನೀಡಬೇಕು.

* ಎಂಆರ್‌ಎಫ್ ಆಪರೇಟರ್‌ಗೆ ಸೇವಾ ಶುಲ್ಕದ ಸಕಾಲಿಕ ಪಾವತಿ, ನಿರೀಕ್ಷೆಗಿಂತ ಕಡಿಮೆ ತ್ಯಾಜ್ಯ ಸಂಗ್ರಹವಾದರೆ ಸೇವಾ ಶುಲ್ಕದ ಶೇ. 50ರಷ್ಟು ಪಾವತಿ ಮಾಡಬೇಕು.

ಯೋಜನೆಯ ಪರಿಣಾಮ:

* ಎಂಆರ್‌ಎಫ್ ಸ್ಥಾಪಿಸಿದ ನಂತರ ಸಂಗ್ರಹಿಸಲಾದ ತ್ಯಾಜ್ಯದ ಪ್ರಮಾಣ 1-2 ಟನ್‌ಗಳಿಂದ 4-5 ಟನ್‌ಗಳಿಗೆ ಏರಿಕೆಯಾಗಿದೆ.

* ತ್ಯಾಜ್ಯವನ್ನು ಎಸೆಯುವುದು ಮತ್ತು ಸಾರ್ವಜನಿಕವಾಗಿ ಕಸ ಬಿಸಾಡುವುದು ವ್ಯಾಪಕವಾಗಿ ಕಡಿಮೆಯಾಗಿದೆ.

* ವಿವಿಧ ವರ್ಗದ ತ್ಯಾಜ್ಯಗಳ ವೈಜ್ಞಾನಿಕ ನಿರ್ವಹಣೆ ಮತ್ತು ವಿಲೇವಾರಿ ಕುರಿತು ಸಾರ್ವಜನಿಕರಲ್ಲಿ ಅರಿವು ಹೆಚ್ಚಾಗಿದೆ.

* ಎಂಆರ್‌ಎಫ್ ಕೇಂದ್ರ ಅಧಿಕೃತ ಮರು ಬಳಕೆದಾರರಿಗೆ ಹೆಚ್ಚಿನ ದರದಲ್ಲಿ ತ್ಯಾಜ್ಯ ಮಾರಾಟ ಮಾಡುತ್ತಿದೆ.

* ಮರು ಬಳಕೆ ಮಾಡಲಾಗದ ತ್ಯಾಜ್ಯವನ್ನು ಸಿಮೆಂಟ್ ಕಂಪೆನಿಗಳಿಗೆ ರವಾನಿಸಲಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!