ಮಳೆಗಾಲ ಬಂತು ಅಂದರೆ ಮನೆಯ ಸುತ್ತಮುತ್ತ ತೇವಾಂಶ ಹೆಚ್ಚಾಗುತ್ತದೆ. ಈ ಸಮಯದಲ್ಲಿ ಅಡುಗೆಮನೆ, ಸ್ನಾನಗೃಹ ಸೇರಿದಂತೆ ಮನೆಯಲ್ಲಿ ಜಿರಳೆಗಳು ಮತ್ತು ಹಲ್ಲಿಗಳ ಕಾಟ ಸಾಮಾನ್ಯ. ದಿನನಿತ್ಯ ಸ್ವಚ್ಛತೆ ಮಾಡಿದ್ದರೂ ಅವುಗಳನ್ನು ಸಂಪೂರ್ಣವಾಗಿ ತಡೆಯುವುದು ಕಷ್ಟವಾಗುತ್ತದೆ. ಆದರೆ ಅಡುಗೆಮನೆಯಲ್ಲೇ ಇರುವ ಕೆಲವು ಸಾಮಾನ್ಯ ವಸ್ತುಗಳನ್ನು ಬಳಸಿಕೊಂಡು ನೀರಿನಲ್ಲಿ ಬೆರೆಸಿ ನೆಲ ಒರೆಸಿದರೆ ಈ ಕೀಟಗಳಿಂದ ಸುಲಭವಾಗಿ ಮುಕ್ತಿ ಪಡೆಯಬಹುದು ಎಂದು ತಜ್ಞರು ಹೇಳುತ್ತಾರೆ.
ವಿನೇಗರ್ ಮತ್ತು ಅಡುಗೆ ಸೋಡಾ
ಒಂದು ಕಪ್ ವಿನೇಗರ್‌ಗೆ 2–3 ಚಮಚ ಅಡುಗೆ ಸೋಡಾ ಸೇರಿಸಿ, ಆ ದ್ರಾವಣವನ್ನು ನೆಲ ಒರೆಸುವ ನೀರಿಗೆ ಬೆರೆಸಿ. ಈ ವಿಧಾನದಿಂದ ಜಿರಳೆ, ಕೀಟ ಹಾಗೂ ಹಲ್ಲಿಗಳು ಮನೆಯಲ್ಲಿ ಹೆಚ್ಚು ಕಾಲ ಇರಲು ಸಾಧ್ಯವಾಗುವುದಿಲ್ಲ.

ಉಪ್ಪು ಮತ್ತು ನಿಂಬೆರಸ
ಒರೆಸುವ ನೀರಿಗೆ 4–5 ಚಮಚ ಉಪ್ಪು ಹಾಗೂ 2 ನಿಂಬೆ ಹಣ್ಣಿನ ರಸವನ್ನು ಸೇರಿಸಿ ಬಳಸಿದರೆ ಮನೆ ಹೊಳೆಯುತ್ತದೆ. ಜೊತೆಗೆ ಜಿರಳೆಗಳು ಮತ್ತು ಹಲ್ಲಿಗಳ ಕಾಟವೂ ಕಡಿಮೆಯಾಗುತ್ತದೆ. ಈ ದ್ರಾವಣವನ್ನು ನೆಲದಷ್ಟೇ ಅಲ್ಲ, ಗೋಡೆ ಹಾಗೂ ಪೀಠೋಪಕರಣಗಳ ಮೇಲೂ ಬಳಸಬಹುದು.

ಕರ್ಪೂರ ಪುಡಿ ಮತ್ತು ಲವಂಗ ಎಣ್ಣೆ
5–6 ಕರ್ಪೂರ ಪುಡಿ ಮಾಡಿ ನೀರಿನಲ್ಲಿ ಹಾಕಿ, ಅದಕ್ಕೆ ಕೆಲವು ಹನಿ ಲವಂಗ ಎಣ್ಣೆ ಸೇರಿಸಿ. ಈ ದ್ರಾವಣದಿಂದ ಮನೆಯನ್ನು ಒರೆಸಿದರೆ ಬಲವಾದ ವಾಸನೆ ಜಿರಳೆ–ಹಲ್ಲಿಗಳನ್ನು ಓಡಿಸುತ್ತದೆ.

ಈರುಳ್ಳಿ ಮತ್ತು ಬೆಳ್ಳುಳ್ಳಿ
ಈರುಳ್ಳಿ ಅಥವಾ ಬೆಳ್ಳುಳ್ಳಿಯ ತುಂಡುಗಳನ್ನು ಮನೆಯ ಮೂಲೆಗಳಲ್ಲಿ ಇಟ್ಟರೆ ಅವುಗಳ ಕಟುವಾದ ವಾಸನೆ ಹಲ್ಲಿಗಳನ್ನು ತಡೆಯಲು ಸಹಕಾರಿ. ಇದು ನೈಸರ್ಗಿಕ ಮತ್ತು ಸುಲಭ ಪರಿಹಾರ.

ನ್ಯಾಫ್ತಲೀನ್ ಚೆಂಡುಗಳು ಮತ್ತು ಮಸಾಲೆಗಳು
ಕಪಾಟುಗಳು, ಡ್ರಾಯರ್‌ಗಳಲ್ಲಿ ನ್ಯಾಫ್ತಲೀನ್ ಚೆಂಡುಗಳನ್ನು ಇಟ್ಟರೆ ಹಲ್ಲಿಗಳು ಸಮೀಪಿಸದೇ ಇರುತ್ತವೆ. ಅದೇ ರೀತಿ ಒಣಗಿದ ಮೆಣಸಿನ ಪುಡಿ ಅಥವಾ ಕಾಫಿ ಪುಡಿಯನ್ನು ಚೀಲಗಳಲ್ಲಿ ಇಟ್ಟು ಮೂಲೆಗಳಲ್ಲಿ ಇಟ್ಟರೆ ಕೀಟಗಳು ಬರುವುದಿಲ್ಲ,