ಕುಶಾಲನಗರದ ತಾವರೆಕೆರೆ ಬಫರ್ ಝೋನ್ ಒತ್ತುವರಿ ತೆರವು

ದಿಗಂತ ವರದಿ ಕುಶಾಲನಗರ:

ಕುಶಾಲನಗರದ ತಾವರೆಕೆರೆಯ ಬಫರ್ ಝೋನ್’ನಲ್ಲಿ‌ ನಿರ್ಮಾಣವಾಗಿದ್ದ ಕಟ್ಟಡಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಶನಿವಾರ ನಡೆಯಿತು.
ಕೆರೆ ದಂಡೆಯ ಎರಡೂ ಬದಿಯ 30 ಮೀಟರ್ ಅಂತರದಲ್ಲಿ ಕಬ್ಬಿಣಗಳು, ಶೀಟ್’ಗಳನ್ನು ಬಳಸಿ ಮರದ ಸಾಮಿಲ್ ಹಾಗೂ ಸೆರಾಮಿಕ್ ಗೋದಾಮು, ವಾಣಿಜ್ಯ‌ ಮಳಿಗೆಗಳನ್ನು ನಿರ್ಮಿಸಲಾಗಿತ್ತು.
ಹೈಕೋರ್ಟ್ ನಿರ್ದೇಶನದಂತೆ ಪಟ್ಟಣ ಪಂಚಾಯ್ತಿ ಹಾಗೂ ಕಂದಾಯ ಇಲಾಖೆ ಅಧಿಕಾರಿ ಸಿಬ್ಬಂದಿಗಳ ಸಮ್ಮುಖದಲ್ಲಿ ಪೊಲೀಸ್ ಭದ್ರತೆಯಲ್ಲಿ ತೆರವು ಕಾರ್ಯಾಚರಣೆ ನಡೆಸಲಾಯಿತು. ಪ.ಪಂ‌.ನೋಟಿಸ್’ಗೆ ಸ್ಪಂದಿಸಿದ ಮಳಿಗೆಗಳ ಮಾಲಕರು ಸ್ವಯಂ ಪ್ರೇರಿತರಾಗಿ ತೆರವುಗೊಳಿಸಿದರು.
ಕೆರೆ ಬದಿಯ ಸೆರಾಮಿಕ್ಸ್, ಮರದ ಮಿಲ್ ತೆರವು ಕಾರ್ಯಾಚರಣೆ ಮೂಲಕ ಕೆರೆ ದಂಡೆಯ ಪ್ರದೇಶವನ್ನು ಸರಕಾರದ ಸುಪರ್ದಿಗೆ ತೆಗೆದುಕೊಳ್ಳಲಾಯಿತು.
ವಕೀಲ ಅಮೃತೇಶ್ ಎಂಬವರು ಕೆರೆ ಒತ್ತುವರಿ ಶಂಕಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿ ಹಿನ್ನೆಲೆಯಲ್ಲಿ ಕಳೆದ 6 ತಿಂಗಳ ಹಿಂದೆ ಕೆರೆಯ ಸರ್ವೆ ಕಾರ್ಯ ನಡೆದಿತ್ತು. ಅದರನ್ವಯ ತೆರವು ಕಾರ್ಯಾಚರಣೆ ನಡೆಯಿತು.
ಪ.ಪಂ‌. ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆ ಸಂದರ್ಭ ಕಂದಾಯಾಧಿಕಾರಿ ಸಂತೋಷ್, ಗ್ರಾಮ‌ಲೆಕ್ಕಿಗ ಗೌತಮ್, ಪ.ಪಂ.ನ ಉದಯಕುಮಾರ್, ಶಕೀಲ್, ಕುಮಾರ್ ಸೇರಿದಂತೆ ಪೌರಕಾರ್ಮಿಕರು ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!