ಶಿರಾಡಿ ಘಾಟ್ ನ ರಸ್ತೆಯಲ್ಲಿನ ಮಣ್ಣಿನ ರಾಶಿ ತೆರವು: ರಾತ್ರಿ ಸಂಚಾರ ನಿಷೇಧ

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಸತತವಾಗಿ ಸುರಿಯುತ್ತಿರುವ ಭಾರೀ ಮಳೆಗೆ ಶಿರಾಡಿ ಘಾಟ್ ಪ್ರದೇಶದ ಸಕಲೇಶಪುರ ತಾಲೂಕಿನ ಮಾರ್ನಳ್ಳಿ ದೊಡ್ಡತಪ್ಪುಲು ಎಂಬಲ್ಲಿ ಭೂ ಕುಸಿತವುಂಟಾಗಿ ಮಣ್ಣಿನ ರಾಶಿಯಲ್ಲಿ ಸಿಲುಕಿದ್ದ ಟ್ಯಾಂಕರ್ ನ್ನು ಶುಕ್ರವಾರದಂದು ತೆರವುಗೊಳಿಸುವ ಮೂಲಕ ಹೆದ್ದಾರಿಯನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.

ಆದ್ರೆ ಸುರಕ್ಷತೆಯ ಕಾರಣಕ್ಕೆ ರಾತ್ರಿ ವಾಹನ ಸಂಚಾರವನ್ನು ತಡೆಹಿಡಿಯಲು ಹಾಸನ ಜಿಲ್ಲಾಡಳಿತ ನಿರ್ದೇಶನ ನೀಡಿದೆ.

ಭೂ ಕುಸಿತದಿಂದಾಗಿ ಬುಧವಾರದಂದು ಎರಡು ಕಂಟೈನರ್ ಹಾಗೂ ಒಂದು ಟ್ಯಾಂಕರ್ ಮಣ್ಣಿನಡಿ ಸಿಲುಕಿತ್ತು. ಕೆಸರು ಮಣ್ಣಿನ ರಾಶಿಯಿಂದಾಗಿ ಟ್ಯಾಂಕರ್ ತೆರವು ವಿಳಂಬವಾಗಿ ಶುಕ್ರವಾರದಂದು ಯಶಸ್ವಿಯಾಗಿದೆ. ಈ ಕಾರಣಕ್ಕೆ ಕಳೆದೆರಡು ದಿನಗಳಿಂದ ತಡೆ ಹಿಡಿಯಲ್ಪಟ್ಟು ಹೆದ್ದಾರಿಯಲ್ಲೇ ಬಾಕಿಯಾಗಿದ್ದ ಘನ ವಾಹನಗಳನ್ನು ಶುಕ್ರವಾರ ಮಧ್ಯಾಹ್ನದಿಂದ ಸಾಯಂಕಾಲದ ಅವಧಿಯಲ್ಲಿ ಸಂಚರಿಸಲು ಅನುವು ಮಾಡಿಕೊಡುವ ಮೂಲಕ ತಡೆ ಹಿಡಿಯಲ್ಪಟ್ಟ ಎಲ್ಲಾ ವಾಹನಗಳು ಹೆದ್ದಾರಿಯಿಂದ ತೆರವುಗೊಳಿಸಿದರು.

ಶುಕ್ರವಾರ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಹೆದ್ದಾರಿಯು ಸಂಚಾರ ಯೋಗ್ಯವಾಗಿದ್ದರೂ, ರಾತ್ರಿ ವೇಳೆ ಸಂಭಾವ್ಯ ಭಾರೀ ಮಳೆಯಿಂದ ಮತ್ತೆ ಗುಡ್ಡ ಕುಸಿತ ಸಂಭವಿಸುವ ಸಾಧ್ಯತೆಯನ್ನು ಅಂದಾಜಿಸಿ ಹಾಸನ ಜಿಲ್ಲಾಧಿಕಾರಿಯವರು ಶುಕ್ರವಾರ ರಾತ್ರಿ ೭.೦೦ ಗಂಟೆ ಶನಿವಾರ ಮುಂಜಾನೆಯವರೆಗೆ ವಾಹನ ಗಳ ಸಂಚಾರಕ್ಕೆ ನಿಷೇಧವಿಧಿಸಿದ್ದಾರೆ.

ಗುಂಡ್ಯ ತಪಾಸಣಾ ಕೇಂದ್ರದಲ್ಲಿ ವಾಹನ ಸಂಚಾರವನ್ನು ತಡೆಹಿಡಿಯುವ ಸಲುವಾಗಿ ಬ್ಯಾರಿಕೇಡ್ ಅಳವಡಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!