Tuesday, March 28, 2023

Latest Posts

ಬಜೆಟ್‌ನಲ್ಲಿ ಮೈಸೂರಿಗರ ಹಲವು ನಿರೀಕ್ಷೆಗಳನ್ನು ಈಡೇರಿಸಿ, ಹೊಸ ಯೋಜನೆಗಳನ್ನು ಘೋಷಿಸಿದ ಸಿಎಂ

ಹೊಸದಿಗಂತ ವರದಿ,ಮೈಸೂರು:

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ ಚೊಚ್ಚಲ ಬಜೆಟ್‌ನಲ್ಲಿ ಮೈಸೂರಿಗರು ಇಟ್ಟುಕೊಂಡಿದ್ದ ನಿರೀಕ್ಷೆಗಳಲ್ಲಿ ಹಲವುಗಳನ್ನು ಈಡೇರಿಸುವ ಪ್ರಯತ್ನ ಮಾಡಲಾಗಿದೆ. ಕೆಲವಾರು ಹೊಸ ಯೋಜನೆಗಳು ಮೈಸೂರಿಗೆ ಸಿಕ್ಕಿವೆ. ಅವುಗಳೆಂದರೆ, ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯು ಮುಂದಿನ 2024ರಲ್ಲಿ ನೂರು ವರ್ಷ ಪೂರೈಸಿ ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕೆ.ಆರ್. ಆಸ್ಪತ್ರೆಯ ಕಟ್ಟಡ ನವೀಕರಣಕ್ಕೆ 89 ಕೋಟಿ ರೂ.
ಮೈಸೂರು-ಶ್ರೀರಂಗಪಟ್ಟಣ-ಹಾಸನ-ಬೇಲೂರು, ಹಳೇಬೀಡು ಪ್ರವಾಸಿ ವೃತ್ತವನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲು ಹಾಗೂ ಸರ್ಕಾರದ ಪರ್ವತಮಾಲಾ ಯೋಜನೆಯಡಿ ಚಾಮುಂಡಿಬೆಟ್ಟಕ್ಕೆ ರೋಪ್‌ವೇ ಪ್ರಸ್ತಾಪ.
ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ವತಿಯಿಂದ ತಲಾ 20 ಕೋಟಿ ರೂ. ವೆಚ್ಚದಲ್ಲಿ ಬಿಯಾಂಡ್ ಬೆಂಗಳೂರು ಕ್ಲಸ್ಟರ್ ಸೀಡ್ ಫಂಡ್ ಫಾರ್ ಸ್ಟಾರ್ಟ್ಅಪ್‌ಗಳ ಸ್ಥಾಪನೆ, ಪ್ರಸಕ್ತ ಸಾಲಿನಲ್ಲಿ 12 ಕೋಟಿ ರೂ.ಮೀಸಲು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ, ಅಲ್ಪಸಂಖ್ಯಾತ ಮತ್ತು ಇತರೆ ವರ್ಗದ ಮಕ್ಕಳಲ್ಲಿ ಉನ್ನತ ವಿದ್ಯಾಭ್ಯಾಸ ಪ್ರೋತ್ಸಾಹಿಸಲು ಮೊದಲ ಬಾರಿಗೆ ದೀನದಯಾಳ್ ಸೌಹಾರ್ದ ವಿದ್ಯಾರ್ಥಿನಿಲಯ ಯೋಜನೆಯಡಿ 1 ಸಾವಿರ ಸಾಮರ್ಥ್ಯದ ಬಹುಮಹಡಿ ವಿದ್ಯಾರ್ಥಿನಿಲಯ ಸಮುಚ್ಛಯಕ್ಕೆ 250 ಕೋಟಿ ರೂಗಳನ್ನು ಮೀಸಲಿಡಲಾಗಿದೆ.
ಅಗರಬತ್ತಿ ಪ್ರೋತ್ಸಾಹಿಸಲು ಮೈಸೂರಿನಲ್ಲಿ ಅಗರಬತ್ತಿ ತಯಾರಿಕೆ ಕುರಿತು ಮೈಕ್ರೊ ಕ್ಲಸ್ಟರ್‌ಗಳ ರಚನೆ.
ಕೇಂದ್ರ ಸರ್ಕಾರದ 460 ಕಿ.ಮೀ ಉದ್ದದ ಚೆನೈ , ಬೆಂಗಳೂರು-ಮೈಸೂರು ಹೈಸ್ಪೀಡ್ ರೈಲ್ವೆ ಕಾರಿಡಾರ್ ನಿರ್ಮಿಸಲು ನ್ಯಾಷನಲ್ ಹೈ ಸ್ಪೀಡ್ ರೈಲ್ವೆ ಪಾಜೆಕ್ಟ್ ವಿಸ್ತೃತ ಯೋಜನಾ ವರದಿಯನ್ನು ಸಿದ್ದಪಡಿಸುತ್ತಿದ್ದು, ಈ ಯೋಜನೆಯ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಕೇಂದ್ರದ ಜತೆ ಕೈಜೋಡಿಸಲು ಆಯವ್ಯಯದಲ್ಲಿ ಪ್ರಸ್ತಾಪ ಮಾಡಲಾಗಿದೆ.
ಕೇಂದ್ರ ಸರ್ಕಾರದ ನೆರವಿನೊಂದಿಗೆ ನಂಜನಗೂಡು ರಸ್ತೆಯಲ್ಲಿರುವ ಮೈಸೂರು ವಿಮಾನ ನಿಲ್ದಾಣದ ರನ್‌ವೇ ವಿಸ್ತರಿಸಲು ಘೋಷಣೆ.
ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಚಿತ್ರ ನಟ ಪುನೀತ್ ರಾಜ್ ಕುಮಾರ್ ಅವರು ನಡೆಸುತ್ತಿದ್ದ ಶಕ್ತಿಧಾಮಕ್ಕೆ ವಿಶೇಷ ನೆರವು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ 30 ಕೋಟಿಯೋಜನೆ ವೆಚ್ಚದಲ್ಲಿ ಮೈಸೂರು ದಿ ಗ್ಲೋಬಲ್ ಟೆಕ್ನಾಲಜಿ ಸೆಂಟರ್ ಪ್ಲಗ್ ಅಂಡ್ ಪ್ಲೇ ಸೌಲಭ್ಯವನ್ನು ಎರಡು ವರ್ಷಗಳ ಅವಧಿಯಲ್ಲಿ ಸ್ಥಾಪಿಸಲು ಘೋಷಣೆ ಮಾಡಿದ್ದು, 2022-23ರಲ್ಲಿ ಮೊದಲ ಹಂತವಾಗಿ 10 ಕೋಟಿ ರೂ. ಒದಗಿಸಲಾಗಿದೆ.
ಮೈಸೂರು ಅರಮನೆಯಲ್ಲಿ ಮೊದಲ ಬಾರಿಗೆ ಪ್ರಾಯೋಗಿಕವಾಗಿ ಎಆರ್ ಮತ್ತು ವಿಆರ್ ತುಣುಕುಗಳನ್ನು ಸೃಜಿಸಲು ಘೋಷಣೆ.
ಮೈಸೂರು ನಗರದಲ್ಲಿ ಕೌಶಲ್ಯಾಧಾರಿತ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿರುವಂತೆ ರಾಜ್ಯಾದ್ಯಂತ ಯುವ ಕೇಂದ್ರೀತ ವಿವಿಧ ಯೋಜನೆಗಳನ್ನು ಯುವಜನತೆಗೆ ಉತ್ತಮ ಸೇವೆಗಳನ್ನು ಒದಗಿಸಲು, ಕೆ.ಆರ್.ಎಸ್. ಜಲಾಶಯದ ಹಿನ್ನೀರಿನಲ್ಲಿ ಸಾಹಸ ಕ್ರೀಡಾ ತರಬೇತಿ ಘೋಷಣೆ ಮಾಡಲಾಗಿದೆ.
ಮೈಸೂರು ನಗರ ಪೊಲೀಸ್ ಆಯುಕ್ತರ ವ್ಯಾಪ್ತಿಯಲ್ಲಿ 200 ಸರ್ವೇಲೆನ್ಸ್ ಕ್ಯಾಮೆರಾಗಳನ್ನು ಅಳವಡಿಸುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!