ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಸಸ್ಪೆಂಡ್ ಆಗಿದ್ದ ಪೊಲೀಸ್ ಗೆ ಸಿಎಂ ಪದಕ ಘೋಷಣೆ !

ಹೊಸದಿಗಂತ ಮೈಸೂರು;

ಅಪರಾಧ ಪ್ರಕರಣಗಳಲ್ಲಿ ಆರೋಪಿಗಳ ಜೊತೆ ಸಂಪರ್ಕ,ಸಾರ್ವಜನಿಕರ ಆಸ್ತಿ ಕಳುವಿಗೆ ಪರೋಕ್ಷ ಸಹಾಯ,ದಾಖಲೆಗಳ ಸೋರಿಕೆ ಮಾಡುವ ಶಂಕೆ ಮುಂತಾದ ಹಲವು ಆರೋಪಗಳ ಹಿನ್ನಲೆಯಲ್ಲಿ ಸಸ್ಪೆಂಡ್ ಆದ ಮೈಸೂರು ಸಿಸಿಬಿ ಘಟಕದ ಮುಖ್ಯಪೇದೆಗೆ ಮುಖ್ಯಮಂತ್ರಿ ಪದಕ ಘೋಷಿಸಲಾಗಿದೆ!

ಹೌದು ಇದು ಆಶ್ಚರ್ಯವಾದರೂ ಸತ್ಯ! ಒಂದು ತಿಂಗಳ ಹಿಂದೆ ಸಸ್ಪೆಂಡ್ ಆಗಿರುವ ಮುಖ್ಯಪೇದೆ ಸಲೀಂ ಪಾಷಾ ಹೆಸರನ್ನು ಇದೀಗ ಬಿಡುಗಡೆಯಾದ ಮುಖ್ಯಮಂತ್ರಿಗಳ ಪದಕದ ಪಟ್ಟಿಯಲ್ಲಿ ಪ್ರಕಟವಾಗಿರುವುದು ಅಚ್ಚರಿಗೆ ಕಾರಣವಾಗಿದೆ. ಅಪರಾಧಿಗಳನ್ನು ಹಿಡಿಯಲು ಧೈರ್ಯ, ಶೌರ್ಯ, ಸಾಹಸಗಳನ್ನು ಮೆರೆದವರು, ಕರ್ತವ್ಯ ನಿಷ್ಠೆಯುಳ್ಳವರು, ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದವರಿಗೆ ಮುಖ್ಯಮಂತ್ರಿಗಳ ಪದಕವನ್ನು ನೀಡಿ ಗೌರವಿಸಲಾಗುತ್ತದೆ.

2023ನೇ ಸಾಲಿಗೆ ಆಯ್ಕೆಯಾದವರ ಸಿಬ್ಬಂದಿ ಅಧಿಕಾರಿಗಳ ಪಟ್ಟಿಯಲ್ಲಿ ಹಲವು ಆರೋಪಗಳನ್ನು ಹೊತ್ತು ಸಸ್ಪೆಂಡ್ ಆಗಿರುವ ಪೊಲೀಸ್ ಮುಖ್ಯಪೇದೆ ಸಲಾಂ ಪಾಷಾರ ಹೆಸರು ಪ್ರಕಟವಾಗಿದೆ.ಮೇಟಗಳ್ಳಿ ಹಾಗೂ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕನ್ನಕಳುವು ಹಾಗೂ ಗಾಂಜಾ ಪ್ರಕರಣಗಳ ಆರೋಪಿಗಳ ಸಂಬಂಧಿಕರ ಜೊತೆ ಸಂಪರ್ಕ ಇಟ್ಟುಕೊಂಡಿರುವ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದಿದೆ. ಸಮಾಜಘಾತುಕ ಶಕ್ತಿಗಳ ಜೊತೆ ಕೈಜೋಡಿಸಿ ಸಾರ್ವಜನಿಕರ ಸ್ವತ್ತು ಕಳುವಾಗಲು ಕಾರಣೀಭೂತರಾಗಿರುತ್ತಾರೆ.

ಇದರಿಂದಾಗಿ ಮುಂದಿನ ದಿನಗಳಲ್ಲಿ ಇಲಾಖೆಯ ಆಂತರಿಕ ಮತ್ತು ಗುಪ್ತ ಮಾಹಿತಿಗಳು ಸೋರಿಕೆಯಾಗಿ, ಸಾರ್ವಜನಿಕರ ಸ್ವತ್ತುಗಳು ಹೆಚ್ಚು ಹೆಚ್ಚಾಗಿ ಕಾಣೆಯಾಗುವ ಸಾಧ್ಯತೆಗಳು ಇರುವುದಾಗಿ ಕಾರಣ ನೀಡಿ ಸಲೀಂ ಪಾಷಾರನ್ನ ಸಸ್ಪೆಂಡ್ ಮಾಡಲಾಗಿದೆ. ಹೀಗಿದ್ದೂ ಸಲೀಂ ಪಾಷಾ ಹೆಸರು ಮುಖ್ಯಮಂತ್ರಿಗಳ ಪದಕ ಗಳಿಸುವಲ್ಲಿ ಯಶಸ್ವಿಯಾಗಿರುವುದು ಇಲಾಖಾ ವ್ಯವಸ್ಥೆಯನ್ನ ಅನುಮಾನದಿಂದ ನೋಡುವಂತಾಗಿದೆ. ಮುಖ್ಯಮಂತ್ರಿಗಳ ಪದಕ ಪಡೆಯಬೇಕಿದ್ದಲ್ಲಿ ಸಾಕಷ್ಟು ಹಂತಗಳಿವೆ. ಹಿರಿಯ ಅಧಿಕಾರಿಗಳ ಶಿಫಾರಸ್ಸು ಅಗತ್ಯವಿದೆ. ಹೀಗಿದ್ದರೂ ಪದಕ ಪಡೆಯುವಲ್ಲಿ ಅರ್ಹತೆ ಪಡೆದಿದ್ದಾರೆ ಅಂದ್ರೆ ಇಡೀ ವ್ಯವಸ್ಥೆಯನ್ನ ಅನುಮಾನದಿಂದ ನೋಡಲೇ ಬೇಕಾಗುತ್ತದೆ. ಅಧಿಕಾರಿಯೊಬ್ಬರ ಅಭಿಪ್ರಾಯದಂತೆ ಇದು 2023ರ ಕರ್ತವ್ಯದ ಆಧಾರದ ಮೇಲೆ ಕೊಟ್ಟಿದ್ದಾರೆಂದು ಸಮರ್ಥಿಸಿಕೊಳ್ಳಲಾಗುತ್ತಿದೆ. ಹಾಗಿದ್ದಲ್ಲಿ ಕಳೆದ ವರ್ಷ ಒಳ್ಳೆಯವನಾದ ವ್ಯಕ್ತಿ, ಈ ವರ್ಷ ಕಳ್ಳನಾದರೆ ಆತ ಒಳ್ಳೆಯವನೆಂದೇ ಭಾವಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರ ನೀಡಬೇಕಿದೆ. ಒಟ್ಟಾರೆ ಸಲೀಂ ಪಾಷಾ ರವರಿಗೆ ಮುಖ್ಯಮಂತ್ರಿಗಳ ಪದಕ ದಕ್ಕಿರುವುದು ಸೋಜಿಗವಲ್ಲದೆ ಇನ್ನೇನು!

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!