ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ನಾನಾ ರೂಪ ಪಡೆಯುತ್ತಿದ್ದು, ಇದೀಗ ಅಖಾಡಕ್ಕಿಳಿದ ಎನ್ ಸಿ ಪಿ ಮುಖ್ಯಸ್ಥ ಶರದ್ ಪವಾರ್, ಕರ್ನಾಟಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಹೇಳಿಕೆಗಳಿಂದಲೇ ಈ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದ್ದಾರೆ.
ಮುಂಬೈನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶರದ್ ಪವಾರ್, ಗಡಿ ವಿವಾದ ವಿಚಾರದಲ್ಲಿ ಕೇಂದ್ರ ಸರ್ಕಾರ ಕೂಡಲೇ ಮಧ್ಯಪ್ರವೇಶ ಮಾಡಬೇಕು. ಕರ್ನಾಟಕ ಸಿಎಂ ಬೊಮ್ಮಾಯಿ ಅವರ ಹೇಳಿಕೆಯಿಂದಲೇ ಈ ಸ್ಥಿತಿ ನಿರ್ಮಾಣವಾಗಿದೆ ಎಂದಿದ್ದಾರೆ.
ಮುಂದಿನ 24 ಗಂಟೆಗಳಲ್ಲಿ ಶಾಂತ ವಾತಾವರಣ ನಿರ್ಮಾಣ ಮಾಡಲಿ ಇಲ್ಲವಾದಲ್ಲಿ ನಾವೂ ತಾಳ್ಮೆ ಕಳೆದುಕೊಳ್ಳಬೇಕಾಗುತ್ತದೆ. ಏನಾದರೂ ಅನಾಹುತವಾದರೆ ಅದಕ್ಕೆ ಸಿಎಂ ಬೊಮ್ಮಾಯಿ ಅವರೇ ನೇರ ಹೊಣೆ ಎಂದು ಗದರಿದ್ದಾರೆ.
ಈ ರೀತಿ ಘಟನೆಗಳು ದೇಶಕ್ಕೆ ಮಾರಕ. ಕರ್ನಾಟಕ ಸಿಎಂ ಗಡಿ ವಿವಾದ ಆರಂಭ ಮಾಡಿದ್ದಾರೆ. ಮುಂದಿನ 48 ಗಂಟೆಗಳಲ್ಲಿ ಪ್ರಕರಣ ಮುಗಿಯದಿದ್ದರೆ ನಾನೇ ಬೆಳಗಾವಿಗೆ ಹೋಗಬೇಕಾಗುತ್ತದೆ ಎಂದು ಹೇಳಿದ್ದಾರೆ.