ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಳೆಗಾಲದ ವಿಧಾನಮಂಡಲ ಅಧಿವೇಶನ ಮುಕ್ತಾಯಗೊಳ್ಳುತ್ತಿದ್ದಂತೆಯೇ, ರಾಜ್ಯದ ಪ್ರಗತಿ ಹಾಗೂ ಜನರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಂಡುಕೊಳ್ಳಲು ರಾಜ್ಯ ಸರ್ಕಾರ ಸಮರೋಪಾದಿ ಕಾರ್ಯಪ್ರವೃತ್ತವಾಗಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಕಾಂಗ್ರೆಸ್ ಶಾಸಕರೊಂದಿಗೆ ಸತತ 7 ಗಂಟೆಗಳ ಕಾಲ ಸುದೀರ್ಘ ಹಾಗೂ ಮಹತ್ವದ ಸರಣಿ ಸಭೆ ನಡೆಸುವ ಮೂಲಕ ಅಭಿವೃದ್ಧಿಗೆ ಹೊಸ ವೇಗ ನೀಡಿದ್ದಾರೆ.
ರಾಜ್ಯದ 27 ಜಿಲ್ಲೆಗಳ ಶಾಸಕರೊಂದಿಗೆ ಬ್ಯಾಚ್‌ವಾರು ನಡೆದ ಈ ಸಭೆಯಲ್ಲಿ ಕ್ಷೇತ್ರಗಳ ಮೂಲಸೌಕರ್ಯ, ಅನುದಾನ ಹಂಚಿಕೆ, ಬರ ಪರಿಸ್ಥಿತಿ ನಿರ್ವಹಣೆ, ಎಸ್‌ಐಆರ್ ಪ್ರಕ್ರಿಯೆ ಹಾಗೂ ಭವಿಷ್ಯದ ಅಭಿವೃದ್ಧಿ ಯೋಜನೆಯ ಕುರಿತು ಚರ್ಚಿಸಲಾಯಿತು.
ಪ್ರಾದೇಶಿಕ ಅಗತ್ಯಗಳಿಗೆ ತಕ್ಷಣದ ಸ್ಪಂದನೆ
ಸಭೆಯನ್ನು ಮೂರು ಹಂತಗಳಲ್ಲಿ ಆಯೋಜಿಸಿ, ಪ್ರತಿಯೊಂದು ಜಿಲ್ಲೆಯ ಸಮಸ್ಯೆಗಳನ್ನು ಆಲಿಸಲಾಯಿತು.
ಮೊದಲ ಹಂತ: ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರಗಿ ಹಾಗೂ ಯಾದಗಿರಿ.
ಎರಡನೇ ಹಂತ: ಬೀದರ್, ರಾಯಚೂರು, ಕೊಪ್ಪಳ, ಗದಗ, ಧಾರವಾಡ, ಉತ್ತರ ಕನ್ನಡ, ಹಾವೇರಿ, ವಿಜಯನಗರ ಮತ್ತು ಬಳ್ಳಾರಿ.
ಮೂರನೇ ಹಂತ: ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಹಾಸನ, ದಕ್ಷಿಣ ಕನ್ನಡ, ಕೊಡಗು, ಮೈಸೂರು ಹಾಗೂ ಚಾಮರಾಜನಗರ.
ಪ್ರತಿಯೊಂದು ಕ್ಷೇತ್ರದ ಶಾಸಕರು ತಮ್ಮ ವ್ಯಾಪ್ತಿಯ ಕುಡಿಯುವ ನೀರು, ರಸ್ತೆಗಳ ದುರಸ್ತಿ, ವಸತಿ ಯೋಜನೆಗಳು ಹಾಗೂ ಮೂಲಸೌಕರ್ಯಗಳ ವೃದ್ಧಿಗೆ ಅಗತ್ಯವಿರುವ ಅನುದಾನದ ಕುರಿತು ಮುಖ್ಯಮಂತ್ರಿಗಳ ಗಮನ ಸೆಳೆದರು.
ಅನುದಾನ ಕೊರತೆಯಾಗದಂತೆ ಅಭಯ ನೀಡಿದ ಮುಖ್ಯಮಂತ್ರಿ
ಶಾಸಕರ ಮನವಿಗಳಿಗೆ ತಕ್ಷಣ ಸ್ಪಂದಿಸಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, “ಯಾವುದೇ ಕಾರಣಕ್ಕೂ ರಾಜ್ಯದ ಅಭಿವೃದ್ಧಿ ಕೆಲಸಗಳಿಗೆ ಅನುದಾನದ ಕೊರತೆಯಾಗದಂತೆ ನೋಡಿಕೊಳ್ಳಲಾಗುವುದು” ಎಂದು ಭರವಸೆ ನೀಡಿದರು. ಹಿರಿಯ ಸಚಿವರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ತಕ್ಷಣವೇ ಚರ್ಚಿಸಿ ಅಗತ್ಯ ಸಂಪನ್ಮೂಲ ಬಿಡುಗಡೆ ಮಾಡಲು ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅಭಯ ನೀಡಿದರು.
ಬರಪೀಡಿತ ಜನರ ನೆರವಿಗೆ ಸರ್ಕಾರದ ಬದ್ಧತೆ
ರಾಜ್ಯದಲ್ಲಿ ಎದುರಾಗಿರುವ ಬರ ಪರಿಸ್ಥಿತಿಯನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ರಾಜ್ಯದ 102 ತಾಲೂಕುಗಳಲ್ಲಿ ತೀವ್ರ ಸ್ವರೂಪದ ಬರ ಪರಿಸ್ಥಿತಿ ಇರುವುದನ್ನು ಗಮನದಲ್ಲಿಟ್ಟುಕೊಂಡು, ತಕ್ಷಣವೇ ಪರಿಹಾರ ಕಾರ್ಯಗಳನ್ನು ಚುರುಕುಗೊಳಿಸಲು ಸೂಚಿಸಲಾಗಿದೆ.
- ಬರಪೀಡಿತ ತಾಲೂಕುಗಳ ಜನರ ಕಷ್ಟ-ಸುಖಗಳನ್ನು ಹತ್ತಿರದಿಂದ ತಿಳಿಯಲು ಹಾಗೂ ಪರಿಹಾರ ಕಾಮಗಾರಿಗಳನ್ನು ನೇರವಾಗಿ ಮೇಲ್ವಿಚಾರಣೆ ಮಾಡಲು ಸ್ವತಃ ತಾವೇ ಜಿಲ್ಲಾ ಪ್ರವಾಸ ಕೈಗೊಳ್ಳುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ.



