ಹೊಸದಿಗಂತ ವರದಿ ಶಿವಮೊಗ್ಗ :
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಯೋಧ್ಯೆಗೆ ಹೋಗಿ ಶ್ರೀರಾಮನ ದರ್ಶನ ಪಡೆಯುವುದಾಗಿ ಹೇಳಿರುವುದು ಸ್ವಾಗತಾರ್ಹ. ಇದು ಒಳ್ಳೆಯ ಬದಲಾವಣೆಯಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತುಷ್ಠೀಕರಣ ರಾಜಕಾರಣದಿಂದ ಹೊರ ಬರುತ್ತಿರುವ ಸೂಚನೆ ಇದಾಗಿದೆ. ಈಗಲಾದರೂ ಒಳ್ಳೆಯ ಬುದ್ದಿ ಬಂದಿದೆಯಲ್ಲಾ ಎಂಬ ಸಂತೋಷವಾಗುತ್ತದೆ ಎಂದರು.
ಕಾಂಗ್ರೆಸ್ ಕೊಟ್ಟ ಭರವಸೆಯಂತೆ 5 ನೇ ಗ್ಯಾರಂಟಿ ಯುವ ನಿಧಿಯನ್ನು ಕೊಟ್ಟಿದೆ. ಆದರೆ ಷರತ್ತುಗಳನ್ನು ವಿಧಿಸಿರುವುದು ಅನೇಕ ಪದವೀಧರರು ಹಾಗೂ ಡಿಪ್ಲೊಮಾ ಮಾಡಿರುವುದು ಇದರಿಂದ ವಂಚಿತರಾಗುವಂತಾಗಿದೆ.
ಎಪಿಎಲ್, ಬಿಪಿಎಲ್ ಎಂದು ವಿಂಗಡಿಸಲಾಗಿದೆ. ಪದವಿ ಪಡೆದು 6 ತಿಂಗಳು ಆಗಿರಬೇಕೆಂದು ಹೇಳಲಾಗಿದೆ. ಇಂತಹ ಷರತ್ತುಗಳಿಂದಾಗಿ ಈ ಬಾರಿ ನಾಲ್ಕೈದು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಭತ್ಯೆಯಿಂದ ವಂಚಿತರಾಗುತ್ತಾರೆ ಎಂದರು.
ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ತರಾತುರಿಯಲ್ಲಿ ಯುವ ನಿಧಿ ಜಾರಿ ಮಾಡಿದ್ದಾರೆ. ಈ ವರ್ಷ ಸುಮಾರು 1 ಲಕ್ಷ ಪದವೀಧರರು ಹಾಗೂ ಡಿಪ್ಲೊಮಾ ಅಭ್ಯರ್ಥಿಗಳು ನೋಂದಣಿ ಮಾಡಿಕೊಳ್ಳಲಿದ್ದಾರೆ. ಉಳಿದವರು ಯೋಜನೆಯಿಂದ ವಂಚಿತರಾಗಲಿದ್ದಾರೆ ಎಂದರು.