ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ಬುಧವಾರ ದೆಹಲಿ ವಿದ್ಯುತ್ ನಿಯಂತ್ರಣ ಆಯೋಗದ (ಡಿಇಆರ್‌ಸಿ) ಅಧ್ಯಕ್ಷರ ಹೆಸರನ್ನು ನಿರ್ಧರಿಸಲು ಸಭೆ ನಡೆಸಲಿದ್ದಾರೆ. ಇಂದು ಸಂಜೆ 4 ಗಂಟೆಗೆ ಎಲ್‌ಜಿ ಸೆಕ್ರೆಟರಿಯೇಟ್‌ನಲ್ಲಿ ಸಭೆ ನಡೆಯಲಿದೆ.
ರಾಜಕೀಯ ಕಚ್ಚಾಟ ಬಿಟ್ಟು ಕೆಲಸ ಮಾಡುವಂತೆ, ಜೊತೆಗೆ ಡಿಇಆರ್‌ಸಿ ಅಧ್ಯಕ್ಷರ ಹೆಸರನ್ನು ಒಟ್ಟಿಗೆ ಕುಳಿತು ನಿರ್ಧರಿಸಲು ಎಲ್‌ಜಿ ಸಕ್ಸೇನಾ ಮತ್ತು ಸಿಎಂ ಕೇಜ್ರಿವಾಲ್ ಅವರನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡ ನಂತರ ಈ ಬೆಳವಣಿಗೆ ಕಂಡುಬಂದಿದೆ.
ಅಲಹಾಬಾದ್ ಹೈಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಉಮೇಶ್ ಕುಮಾರ್ ಅವರನ್ನು ಡಿಇಆರ್‌ಸಿ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದನ್ನು ಲೆಫ್ಟಿನೆಂಟ್ ಗವರ್ನರ್ ಏಕಪಕ್ಷೀಯವಾಗಿ ಸಮ್ಮತಿಯಿಲ್ಲದೆ ಮಾಡಿದ್ದಾರೆ ಎಂಬ ಕಾರಣಕ್ಕೆ ದೆಹಲಿ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.
ವಿಚಾರಣೆ ನಡೆಸಿದ ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಪಿ.ಎಸ್.ನರಸಿಂಹ ಮತ್ತು ಮನೋಜ್ ಮಿಶ್ರಾ ಅವರ ಪೀಠವು ಇಬ್ಬರೂ ರಾಜಕೀಯ ಜಗಳ ಬಿಟ್ಟು ಕೆಲಸ ಮಾಡುವಂತೆ ಚಾಟಿ ಬೀಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ಇಬ್ಬರೂ ಸೇರಿ ಸಭೆ ನಡೆಸಲು ತೀರ್ಮಾನಿಸಿದ್ದಾರೆ.