September 24, 2026
Thursday, September 24, 2026
spot_img

ಫಾಲ್ಟಾಗೆ ವಿಶೇಷ ಪ್ಯಾಕೇಜ್ ಘೋಷಿಸಿದ ಸಿಎಂ ಅಧಿಕಾರಿ: ಚುನಾವಣಾ ಕಣದಿಂದ ಹಿಂದೆ ಸರಿದ ಟಿಎಂಸಿ ಅಭ್ಯರ್ಥಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಬಂಗಾಳದ ಫಾಲ್ಟಾ ಪ್ರದೇಶದ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಸುವೇಂದು ಅಧಿಕಾರಿ ವಿಶೇಷ ಪ್ಯಾಕೇಜ್ ಅನ್ನು ಘೋಷಿಸಿದ್ದು, ಈ ಬೆನ್ನಲ್ಲೇ ಟಿಎಂಸಿ ಅಭ್ಯರ್ಥಿ ಜಹಾಂಗೀರ್​ ಖಾನ್​ ಮೇ 21 ರಂದು ನಡೆಯಲಿರುವ ಮರುಚುನಾವಣೆಯಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದಾರೆ.

ಚುನಾವಣೆಗೆ ಇನ್ನು ಎರಡು ದಿನ ಇರುವಾಗಲೇ ಟಿಎಂಸಿ ಅಭ್ಯರ್ಥಿ, ಅಭಿಷೇಕ್ ಬ್ಯಾನರ್ಜಿ ಅವರ ಆಪ್ತ ಸಹಾಯಕ ಜಹಾಂಗೀರ್ ಖಾನ್ ಅವರು ಯಾವುದೇ ಚುನಾವಣೆಗಳಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದಾರೆ.

ಟಿಎಂಸಿ ಗೆ ಶಾಕ್ ಕೊಟ್ಟ ಖಾನ್

ಈ ಪ್ರದೇಶವು ಶಾಂತಿಯುತವಾಗಿರಬೇಕು ಮತ್ತು ಅಭಿವೃದ್ಧಿ ಹೊಂದಬೇಕು ಎಂದು ನಾನು ಬಯಸಿದ್ದೆ. ಇದೀಗ ಫಾಲ್ಟಾ ಅಭಿವೃದ್ಧಿಗೆ ಸಿಎಂ ವಿಶೇಷ ಪ್ಯಾಕೇಜ್ ಘೋಷಿಸಿದ್ದಾರೆ. ಹಾಗಾಗಿ ನಾನು ಕ್ಷೇತ್ರದ ಮರು ಮತದಾನದಿಂದ ದೂರ ಸರಿಯಲು ನಿರ್ಧರಿಸಿದ್ದೇನೆ ಎಂದು ತಿಳಿಸಿದ್ದಾರೆ. ಇದರಿಂದ ಫಾಲ್ತಾ ವಿಧಾನಸಭಾ ಕ್ಷೇತ್ರದ ಮರುಮತದಾನದ ಪ್ರಚಾರದ ಕೊನೆಯ ದಿನ ತೃಣಮೂಲ ಕಾಂಗ್ರೆಸ್​​ಗೆ ಬಾರಿ ಹೊಡೆತ ಬಿದ್ದಿದೆ.

ಅಖಾಡದಿಂದ ಓಡಿಹೋಗಿದ್ದಾರೆ ಎಂದ ಸಿಎಂ ಸುವೇಂದು

ಇತ್ತ ಬಿಜೆಪಿ ಅಭ್ಯರ್ಥಿ ದೇಬಾಂಶು ಪಾಂಡಾ ಪರವಾಗಿ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಬಿರುಸಿನ ಪ್ರಚಾರ ನಡೆಸಿದ್ದು, ಈ ವೇಳೆ ಕಣದಿಂದ ಹಿಂದೆ ಸರಿದ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ಜಹಾಂಗೀರ್ ಖಾನ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಜಹಾಂಗೀರ್ ಗೆ ಫಾಲ್ತಾ ಕ್ಷೇತ್ರದ ಯಾವುದೇ ಮತಗಟ್ಟೆಯಲ್ಲೂ ಕೂರಲು ಪೋಲಿಂಗ್ ಏಜೆಂಟರೇ ಸಿಕ್ಕಿಲ್ಲ. ಪಕ್ಷದ ಕಾರ್ಯಕರ್ತರು ಯಾರು ಕೂಡ ಅವರ ಪರವಾಗಿ ನಿಲ್ಲಲು ಸಿದ್ಧರಿರಲಿಲ್ಲ .ಹೀಗಾಗಿ ಚುನಾವಣಾ ಅಖಾಡದಿಂದ ಓಡಿಹೋಗಲು ನಿರ್ಧರಿಸಿದ್ದಾರೆ ಎಂದುಲೇವಡಿ ಮಾಡಿದ್ದಾರೆ.

ಈ ಬೆನ್ನಲ್ಲೇ ಮುಜುಗರದಿಂದ ತಪ್ಪಿಸಿಕೊಳ್ಳಲು ಟಿಎಂಸಿ ಪೋಸ್ಟ್ ಹಂಚಿಕೊಂಡಿದ್ದು, ಜಹಾಂಗೀರ್ ಖಾನ್​ರ ನಿರ್ಧಾರವು ವೈಯಕ್ತಿಕವಾಗಿದ್ದು, ಪಕ್ಷಕ್ಕೂ ಇದಕ್ಕೂ ಸಂಬಂಧವಿಲ್ಲ ಎಂದು ಹೇಳಿದೆ.

ಚುನಾವಣಾ ಆಯೋಗ ಹೇಳಿದ್ದೇನು?

ಚುನಾವಣಾ ಆಯೋಗದ ಮೂಲಗಳ ಪ್ರಕಾರ, ಖಾನ್ ನಿಗದಿತ ಗಡುವಿನೊಳಗೆ ತಮ್ಮ ನಾಮಪತ್ರವನ್ನು ಹಿಂತೆಗೆದುಕೊಳ್ಳದ ಕಾರಣ ಹಾಗೂ ನಿಯಮಗಳ ಪ್ರಕಾರ ಚುನಾವಣೆ ನಿಗದಿಯಂತೆ ನಡೆಯಲಿದೆ ಎಂದು ತಿಳಿಸಿದೆ. ಅವರ ಹೆಸರು ಇವಿಎಂನಲ್ಲಿ ಪಕ್ಷದ ಚಿಹ್ನೆಯ ಪಕ್ಕದಲ್ಲೇ ಕಾಣಿಸಿಕೊಳ್ಳುತ್ತದೆ ಎಂದು ಸ್ಙಷ್ಟಪಡಿಸಿದೆ.

ಕಳೆದ ಏಪ್ರಿಲ್ 29 ರಂದು ನಡೆದ ಎರಡನೇ ಹಂತದ ಮತದಾನದ ವೇಳೆ ಫಾಲ್ತಾ ಕ್ಷೇತ್ರದಲ್ಲಿ ವ್ಯಾಪಕ ಅಕ್ರಮಗಳು ನಡೆದ ಹಿನ್ನೆಲೆಯಲ್ಲಿ, ಚುನಾವಣಾ ಆಯೋಗವು ಕ್ಷೇತ್ರದ ಎಲ್ಲಾ 285 ಮತಗಟ್ಟೆಗಳಲ್ಲೂ ಮೇ 21 ರಂದು ಮರುಮತದಾನಕ್ಕೆ ಆದೇಶಿಸಿತ್ತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !