ಹೊಸದಿಗಂತ ಡಿಜಿಟಲ್ ಡೆಸ್ಕ್:
ನಂದಿಪರ್ವತ ಆಶ್ರಮದ ಜೈನಮುನಿ ಆಚಾರ್ಯ ಕಾಮಕುಮಾರ ನಂದಿ ಮಹಾರಾಜರ ಬರ್ಬರ ಹತ್ಯೆ ಪ್ರಕರಣ ಸಂಬಂಧ ಜೈನ ಮುನಿ ಗುಣಧರನಂದಿ ಮಹಾರಾಜ ಸ್ವಾಮೀಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಜೈನ ಮುನಿ ಕಾಮಕುಮಾರನಂದಿ ಮಹರಾಜರನ್ನು ಕೊಲ್ಲಲಾಗಿದೆ. ಇಂತಹ ಪೈಶಾಚಿಕ ಕೃತ್ಯವೆಸಗಿದರೂ ಸಿಎಂ ಸಿದ್ದರಾಮಯ್ಯ (Siddaramaiah) ಸ್ಪಂದನೆ ನೀಡಿಲ್ಲ ಎಂದು ಬಹಿರಂಗವಾಗಿ ಆಕ್ರೋಶ ಹೊರಹಾಕಿದರು.
ದೇಶದಲ್ಲಿ ಆತಂಕವಾದಿಗಳಿಗೆ ಯಾವ ಶಿಕ್ಷೆಯಾಗುವುದಿಲ್ಲವೋ ಅಂತಹ ಶಿಕ್ಷೆ ಜೈನ ಮುನಿಗಳಿಗೆ ನೀಡಲಾಗಿದೆ. ಕಾಮಕುಮಾರನಂದಿ ಶ್ರೀಗಳನ್ನು ಅದಕ್ಕಿಂತ ಕ್ರೂರವಾಗಿ ಕೊಲ್ಲಲಾಗಿದೆ. ಇಂತಹ ದುಷ್ಕೃತ್ಯವೆಸಗಿದರೂ ಸಿಎಂ ಯಾವುದೇ ಸ್ಪಂದನೆ ಮಾಡಿಲ್ಲ. ಅಲ್ಪಸಂಖ್ಯಾತ, ಕುರುಬ ಸಮಾಜದ ಶ್ರೀಗಳಿಗೆ ಹೀಗಾಗಿದರೆ ಸುಮ್ಮನಿರುತ್ತಿದ್ದರಾ? ಎಂದು ಪ್ರಶ್ನಿಸಿದ್ದಾರೆ.
ಸಿಎಂ ಸಿದ್ದರಾಮಯ್ಯನವರಿಗೆ ನಮ್ಮ ಸಮಾಜದ ಬಗ್ಗೆ ಯಾಕಿಷ್ಟು ನಿರ್ಲಕ್ಷ್ಯ, ಒಬ್ಬ ಜೈನಮುನಿಗೆ ಈ ರೀತಿ ಚಿತ್ರಹಿಂಸೆ ನೀಡಿ ಕೊಲೆ ಮಾಡಿರುವುದು ನಿಜಕ್ಕೂ ನೋವಿನ ಸಂಗತಿ. ಮಾಧ್ಯಮಗಳ ಸಹಾಯದಿಂದ ಈ ಕೃತ್ಯ ಇದೀಗ ಬೆಳಕಿಗೆ ಬಂದಿದೆ. ಇದೀಗ ಸರ್ಕಾರ ಹಾಗೂ ಜನಪ್ರತಿನಿಧಿಗಳಿಂದ ಸ್ಪಂದನೆ ಸಿಗುತ್ತಿದೆ. ನಾಳೆ ಸಂಜೆ 5 ಗಂಟೆ ಒಳಗೆ ನಮ್ಮ ಬೇಡಿಕೆಗೆ ಮನ್ನಣೆ ನೀಡುವುದಾಗಿ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಭರವಸೆ ನೀಡಿದ್ದಾರೆ ಎಂದರು.
ಇಂದು ಜೈನ ಮುನಿಗಳು ದೇಶಾಂತರ ಪಾದಯಾತ್ರೆ ಮಾಡುವಾಗ ಭದ್ರತೆ ಇಲ್ಲದಿರುವುದರಿಂದ ಭಯದ ವಾತಾವರಣ ನಿರ್ಮಾಣವಾಗಿದೆ. ಪಾದಯಾತ್ರೆ ಮಾಡುವ ಪ್ರತಿಯೊಬ್ಬ ಜೈನಮುನಿಗಳಿಗೆ ಸೂಕ್ತ ಭದ್ರತೆ ಜೊತೆಗೆ ಆಶ್ರಯ ನೀಡಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮೂಲಕ ಕೇಂದ್ರ ಗೃಹಸಚಿವರಿಗೆ ಮನವಿ ಸಲ್ಲಿಸಲಾಗಿದೆ ಎಂದ ಜೈನಮುನಿ, ನಮ್ಮ ಮನವಿಗೆ ಸರ್ಕಾರ ಸ್ಪಂದಿಸದಿದ್ದರೆ ಅಮರಣಾಂತ ಉಪವಾಸ ಕೈಬಿಡುವುದಿಲ್ಲ. ನಮಗೆ ಭದ್ರತೆ ಒದಗಿಸುವವರೆಗೂ ಅಮರಣಾಂತ ಉಪವಾಸ ನಡೆಸುತ್ತೇವೆ ಎಂದು ಜೈನಮುನಿ ಗುಣಧರನಂದಿ ಎಚ್ಚರಿಕೆ ನೀಡಿದರು.