ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈಗಲೂ ಬಿಜೆಪಿಯಿಂದ ಜೀವ ಬೆದರಿಕೆ ಇದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಅವರು ಗಂಭೀರ ಆರೋಪ ಮಾಡಿದ್ದಾರೆ.
ಮೈಸೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯನವರಿಗೆ ಈಗಲೂ ಬಿಜೆಪಿಯಿಂದ ಜೀವಬೆದರಿಕೆ ಇದೆ. ಜೀವ ಬೆದರಿಕೆ ಇರುವುದರಿಂದಲೇ ಮಾಜಿ ಸಚಿವ ಅಶ್ವತ್ಥನಾರಾಯಣ ವಿರುದ್ಧ ಕ್ರಮಕ್ಕೆ ಒತ್ತಾಯ ಮಾಡುತ್ತಿದ್ದೇವೆ.
ಉರಿಗೌಡ, ನಂಜೇಗೌಡ ಟಿಪ್ಪು ಸುಲ್ತಾನ್ ನನ್ನು ಹೊಡೆದುಹಾಕಿದಂತೆ ಸಿದ್ದರಾಮಯ್ಯರನ್ನು ಹೊಡೆದು ಹಾಕಬೇಕು ಎಂದಿದ್ದ ಅಶ್ವತ್ಥ ನಾರಾಯಣ ಅವರ ಈ ಹೇಳಿಕೆ ವಿಡಿಯೋ ಈಗಲೂ ವೈರಲ್ ಆಗುತ್ತಿದೆ. ಇದರಿಂದ ಸಿದ್ದರಾಮಯ್ಯನವರ ಮೇಲೆ ಮತ್ತೆ ದಾಳಿಯಾಗುವ ಸಾಧ್ಯತೆ ಇದೆ ಎಂದಿದ್ದಾರೆ.
ಸಿಎಂ ಸಿದ್ದರಾಮಯ್ಯನವರಿಗೆ ಏನಾದರು ತೊಂದರೆಯಾದರೆ ಅದಕ್ಕೆ ಬಿಜೆಪಿ, ಅಶ್ವತ್ಥ ನಾರಾಯಣ ಕಾರಣ. ಈ ಕೂಡಲೇ ಅಶ್ವತ್ಥ ನಾರಾಯಣರನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕು. ಯಾವ ಉದ್ದೇಶದಿಂದ ಈ ಹೇಳಿಕೆ ನೀಡಿದ್ದಾರೆ ತಿಳಿಸಬೇಕು. ಸಮಗ್ರ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.
ಫೆಬ್ರವರಿ 16 ರಂದು ಅಶ್ವತ್ಥ್ ನಾರಾಯಣ ಅವರು, ಟಿಪ್ಪು ಹೊಡೆದು ಹಾಕಿದಂತೆ ಸಿದ್ದರಾಮಯ್ಯ ಅವರನ್ನು ಹೊಡೆದು ಹಾಕಿ ಎಂದು ವಿವಾದತ್ಮಕ ಹೇಳಿಕೆಯನ್ನು ನೀಡಿದ್ದರು. ಆದಾದ ಬಳಿಕ ರಾಜ್ಯದ ನಾನಾ ಕಡೆಗಳಲ್ಲಿ ಅವರ ವಿರುದ್ದ ದೂರು ದಾಖಲಾಗಿತ್ತು, ಅದೇ ರೀತಿ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಅವರು ಮೈಸೂರಿನ ದೇವರಾಜ ಠಾಣೆಗೆ ದೂರು ನೀಡಿದ್ದರು, ಆದರೆ ದೂರು ಪಡೆದುಕೊಂಡಿದ್ದ ಪೋಲಿಸರು ಎಫ್‌ಐಆರ್ ದಾಖಲು ಮಾಡಿರಲಿಲ್ಲ. ಈಗ ಮತ್ತೆ ದೂರು ನೀಡಿರುವ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಅವರ ದೂರಿನ ಅನ್ವಯ ಮಾಜಿ ಡಿಸಿಎಂ ಅಶ್ವತ್ಥ್ ನಾರಾಯಣ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ.