ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮುಡಾ ಹಗರಣಕ್ಕೆ ಮತ್ತೊಂದು ಮೆಗಾ ತಿರುವು ಸಿಕ್ಕಿದ್ದು, ಸಿಎಂ ಸಿದ್ದರಾಮಯ್ಯ ಪತ್ನಿ ಹಾಗೂ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರಿಗೆ ಹೈಕೋರ್ಟ್ ಮತ್ತೆ 10 ದಿನಗಳ ಕಾಲ ತಾತ್ಕಾಲಿಕ ರಿಲೀಫ್ ನೀಡಿದೆ.
ಸಿಎಂ ಸಿದ್ದರಾಮಯ್ಯ ಪತ್ನಿಗೆ ಅಕ್ರಮವಾಗಿ ಮುಡಾ ಸೈಟ್ ಹಂಚಿಕೆ ಆರೋಪದಲ್ಲಿ ಇ.ಡಿ (ಜಾರಿ ನಿರ್ದೇಶನಾಲಯ) ಸಚಿವ ಬೈರತಿ ಸುರೇಶ್ ಸೇರಿ ಇಬ್ಬರಿಗೂ ಸಮನ್ಸ್ ಜಾರಿ ಮಾಡಿದೆ. ಇ.ಡಿ ವಿಚಾರಣೆಯ ಹಾಜರಾತಿಗೆ ವಿನಾಯಿತಿ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದು, ಇಂದು ವಿಚಾರಣೆ ನಡೆಸಿದ ನ್ಯಾ.ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಫೆಬ್ರವರಿ 20ಕ್ಕೆ ವಿಚಾರಣೆಯನ್ನು ಮುಂದೂಡಿ ಆದೇಶ ನೀಡಿದೆ.
ಇ.ಡಿ ವಿಚಾರಣೆಯ ಹಾಜರಾತಿಗೆ ವಿನಾಯಿತಿ ಕೋರಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿದೆ. ಇದೇ ವೇಳೆ ಇಬ್ಬರಿಗೂ ನೀಡಿದ್ದ ಸಮನ್ಸ್‌ಗೆ ಕೂಡ ಫೆಬ್ರವರಿ 20ರವರೆಗೆ ತಡೆಯಾಜ್ಞೆಯನ್ನು ವಿಸ್ತರಣೆ ಮಾಡಲಾಗಿದೆ.
ಹೈಕೋರ್ಟ್ ಈ ಆದೇಶದಿಂದ ಸಿಎಂ ಸಿದ್ದರಾಮಯ್ಯ ಪತ್ನಿ ಹಾಗೂ ಸಚಿವ ಬೈರತಿ ಸುರೇಶ್ ಅವರು ಫೆಬ್ರವರಿ 20ರವರೆಗೂ ಇ.ಡಿ ವಿಚಾರಣೆಗೆ ಹಾಜರಾಗುವ ಅಗತ್ಯ ಇಲ್ಲ. ಆದರೆ ಇ.ಡಿಗೆ ಆಕ್ಷೇಪಣೆ ಸಲ್ಲಿಸಲು ಒಂದು ವಾರಗಳ ಕಾಲಾವಕಾಶವನ್ನು ಹೈಕೋರ್ಟ್ ನೀಡಿದೆ.