ಹೊಸದಿಗಂತ ಡಿಜಿಟಲ್ ಡೆಸ್ಕ್:
ಈಗ ಸಿದ್ದರಾಮಯ್ಯ ಅವರ 2 ನೇ ಅವಧಿಯಲ್ಲಿ ಅವರ ಸರ್ಕಾರದ ಸಾಮಾಜಿಕ ಮಾಧ್ಯಮ ನಿರ್ವಹಣೆಯ ಖರ್ಚು ಹೆಚ್ಚು ಸದ್ದು ಮಾಡುತ್ತಿದೆ. ಸಿದ್ದರಾಮಯ್ಯ ಅವರ ಕಚೇರಿ ಅಧಿಕೃತ ಮತ್ತು ವೈಯಕ್ತಿಕ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿರ್ವಹಿಸಲು ತಿಂಗಳಿಗೆ ಸುಮಾರು 54 ಲಕ್ಷ ರೂಪಾಯಿಗಳನ್ನು ಖರ್ಚು ಮಾಡುತ್ತದೆ ಎಂಬುದು ಆರ್‌ಟಿಐ ಮಾಹಿತಿಯ ಮೂಲಕ ಬಹಿರಂಗವಾಗಿದೆ.
ಗ್ಯಾರೆಂಟಿ ಯೋಜನೆಗಳಿಗೆ ಹಣ ಹೊಂದಿಸಲು ಹೆಣಗುತ್ತಿರುವ ಸರ್ಕಾರ ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಹೊಂದಿಸಲು ಸಾಧ್ಯವಾಗದೇ ಪರದಾಡುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಸಿಎಂ ಕಚೇರಿ ಕೇವಲ ಪ್ರಚಾರಕ್ಕಾಗಿ ಇಷ್ಟು ಮೊತ್ತದ ಹಣವನ್ನು ತಿಂಗಳಿಗೆ ಖರ್ಚು ಮಾಡುತ್ತಿರುವುದು ಆಕ್ಷೇಪಕ್ಕೆ ಗುರಿಯಾಗಿದೆ.
ಕಾಂಗ್ರೆಸ್ ಸರ್ಕಾರ ಗುತ್ತಿಗೆದಾರರ ಬಿಲ್ ಇತ್ಯರ್ಥ ಮಾಡಲು ಹೆಣಗಾಡುತ್ತಿದೆ. ಇಂಥ ಸಮಯದಲ್ಲಿ ಸಾಮಾಜಿಕ ಮಾಧ್ಯಮ ಖಾತೆಗಳ ನಿರ್ವಹಣೆಗೆ ಭಾರಿ ವೆಚ್ಚ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಆರ್‌ಟಿಐ ಅಡಿ ಮಾಹಿತಿ ಕೋರಿ ಅರ್ಜಿ ಸಲ್ಲಿಸಿದ್ದೆ ಎಂದು ಆರ್‌ಟಿಐ ಕಾರ್ಯಕರ್ತ ಮಾರಲಿಂಗಗೌಡ ಮಾಲಿ ಪಾಟೀಲ್ ತಿಳಿಸಿದ್ದಾರೆ.
ಈ ಬಗ್ಗೆ ಸರ್ಕಾರ ಪ್ರತಿಕ್ರಿಯೆ ನೀಡಿದ್ದು, ಈ ಹಿಂದಿನ ಮುಖ್ಯಮಂತ್ರಿಗಳ ಖರ್ಚಿಗೆ ಹೋಲಿಸಿದರೆ ಇದು ಕಡಿಮೆ ಎಂದು ಮುಖ್ಯಮಂತ್ರಿ ಕಚೇರಿ ಅಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ.