ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದ ಮಲಪ್ಪುರಂ ಜಿಲ್ಲೆಯ ತನೂರಿನ ಕರಾವಳಿಯಲ್ಲಿ ಪ್ರವಾಸಿ ದೋಣಿಯೊಂದು ಮಗುಚಿ ಬಿದ್ದಿದೆ. ನಿನ್ನೆ (ಭಾನುವಾರ) ರಾತ್ರಿ 7 ಗಂಟೆಗೆ ಸಂಭವಿಸಿದ ಈ ಅಪಘಾತದಲ್ಲಿ ಸಾವಿನ ಸಂಖ್ಯೆ 22 ಕ್ಕೆ ತಲುಪಿದೆ. ಪರಿಹಾರ ಕಾರ್ಯಗಳು ಇನ್ನೂ ನಡೆಯುತ್ತಿವೆ. ಅಪಘಾತದ ವೇಳೆ ದೋಣಿಯಲ್ಲಿ 40 ಮಂದಿ ಇದ್ದರು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಅಪಘಾತದ ವೇಳೆ ಹಲವರು ನಾಪತ್ತೆಯಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆಸಿದೆ.
ಕೇರಳ ಸಿಎಂ ಪಿಣರಾಯಿ ವಿಜಯನ್ ದೋಣಿ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳನ್ನು ಭೇಟಿ ಮಾಡಿದರು. ಬೋಟ್ ಅಪಘಾತದಲ್ಲಿ ಗಾಯಗೊಂಡವರನ್ನು ತಿರುರಂಗಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರನ್ನು ಸಿಎಂ ವಿಜಯನ್ ಭೇಟಿ ಮಾಡಿದರು. ಘಟನೆ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿದೆ. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಪಘಾತ ದುರಂತವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಜೊತೆಗೆ ಮೃತರ ಕುಟುಂಬಗಳಿಗೆ ರೂ. 10 ಲಕ್ಷ ಪರಿಹಾರವನ್ನು ಘೋಷಿಸಿದರು.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಈಗಾಗಲೇ ಮೃತರ ಕುಟುಂಬಕ್ಕೆ ಎರಡು ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಈ ದುರ್ಘಟನೆಯಲ್ಲಿ ಒಂದೇ ಕುಟುಂಬದ 12 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಸಿಎಂ ವಿಜಯನ್ ಕೂಡ ಆ ಕುಟುಂಬವನ್ನು ಭೇಟಿ ಮಾಡಿದ್ದಾರೆ. ಅವರ ನೋವು ವರ್ಣನಾತೀತವಾಗಿದ್ದು, ಈ ದಾರುಣ ಘಟನೆ ತನಗೆ ತುಂಬಾ ನೋವುಂಟು ಮಾಡಿದೆ ಎಂದು ತಿಳಿಸಿದ್ದಾರೆ.