ಹೊಸದಿಗಂತ ವರದಿ, ಬೀದರ್
ಕ್ರಾಂತಿಯ ನೆಲ’ ಎಂದೇ ಹೆಸರಾದ ಬೀದರ ಜಿಲ್ಲೆಯ ಬಸವಕಲ್ಯಾಣದಲ್ಲಿ, ನಗರದ ಹೃದಯಭಾಗವಾದ ಡಾ.ಅಂಬೇಡ್ಕರ್ ವೃತ್ತದಲ್ಲಿ, ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಯನ್ನು ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಏಪ್ರೀಲ್ 9ರಂದು ಅನಾವರಣಗೊಳಿಸಿದರು.
ಬಳಿಕ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಬಸವಕಲ್ಯಾಣ ಪಟ್ಟಣದಲ್ಲಿ ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯ ಏಳನೇ ಸಭೆಯು ಶನಿವಾರ ನೆರವೇರಿತು.
ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ, ನೂತನ ಅನುಭವ ಮಂಟಪ ನಿರ್ಮಾಣಕ್ಕೆ ಸರ್ಕಾರದಿಂದ ಬಿಡುಗಡೆಯಾಗಿರುವ 200 ಕೋಟಿ ರೂ.ಗಳಲ್ಲಿ 20 ಕೋಟಿ ರೂ.ಗಳನ್ನು ಪರುಷ ಕಟ್ಟೆ ಅಭಿವೃದ್ಧಿ ಕೆಲಸಗಳಿಗಾಗಿ ಉಪಯೋಗಿಸಲು ಸಭೆಯಲ್ಲಿ ಅನುಮೋದನೆ ಕೊಟ್ಟಿದ್ದೇವೆ. ಅನುಭವ ಮಂಟಪ ಯೋಜನೆಗಾಗಿ ಜಮೀನುಗಳನ್ನು ನೇರ ಖರೀದಿ ಮಾಡಿದ 12.70 ಕೋಟಿ ರೂ.ಗಳ ಮೊತ್ತಕ್ಕೆ ಕೂಡ ಸಭೆಯಲ್ಲಿ ಅನುಮೋದನೆ ಸಿಕ್ಕಿದೆ ಎಂದು ತಿಳಿಸಿದರು.
ಸ್ಮಾರಕಗಳ ರಕ್ಷಣೆಗೆ ಒತ್ತು:
ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಮಾತನಾಡಿ, ಬಸವಕಲ್ಯಾಣದಲ್ಲಿ ಮಹಾಪುರುಷರ ಸ್ಮಾರಕಗಳಿರುವ ಸ್ಥಳಗಳು ಅತಿಕ್ರಮಣವಾಗುತ್ತಿದ್ದು, ಅವುಗಳ ರಕ್ಷಣೆಗೆ ಕ್ರಮವಹಿಸುವಂತೆ ಕೋರಿದರು. ಈ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಸ್ಮಾರಕಗಳ ಅತಿಕ್ರಮಣ ತಡೆಯಲು ಕೂಡಲೇ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. ಮತ್ತು ಸ್ಮಾರಕಗಳ ನಿರ್ವಹಣೆಗೆ ಸಂಬಂಧಿಸಿದಂತೆ ಅನುದಾನ ಅವಶ್ಯಕತೆಯಿದ್ದಲ್ಲಿ ಸರ್ಕಾರದಿಂದ ನೀಡಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ, ಜಿಲ್ಲಾ ಉಸ್ತುವಾರಿ ಸಚಿವ ಶಂಕರಪಾಟೀಲ ಮುನೇನಕೊಪ್ಪ, ಪಶು ಸಂಗೋಪನೆ ಸಚಿವ ಪ್ರಭು ಚಹ್ವಾಣ್, ಚಿಂತಕರಾದ ಬಸವರಾಜ ಪಾಟೀಲ ಸೇಡಂ, ಕಲಬುರಗಿ ಸಂಸದರಾದ ಡಾ.ಉಮೇಶ ಜಾದವ್, ಕೆಕೆಆರ್ ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ವಿಶೇಷ ಆಹ್ವಾನಿತರಾಗಿ ಶಾಸಕರಾದ ಬಂಡೆಪ್ಪ ಖಾಶೆಂಪೂರ, ರಾಜಶೇಖರ ಪಾಟೀಲ, ರಹೀಂ ಖಾನ್, ಶರಣು ಸಲಗರ, ವಿಧಾನ ಪರಿಷತ್ ಸದಸ್ಯರಾದ ರಘುನಾಥರಾವ್ ಮಲ್ಕಾಪೂರೆ, ಅರವಿಂದಕುಮಾರ ಅರಳಿ ಸೇರಿದಂತೆ ವಿವಿಧ ಗಣ್ಯರು ಹಾಗೂ ವಿವಿಧ ಇಲಾಖೆಗಳ ಉನ್ನತ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ