ಹೊಸದಿಗಂತ ಡಿಜಿಟಲ್ ಡೆಸ್ಕ್:
ಆರ್ಥಿಕ ಮತ್ತು ಆಹಾರ ಬಿಕ್ಕಟ್ಟಿನಿಂದ ತತ್ತರಿಸುತ್ತಿರುವ ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಪರಿಸ್ಥಿತಿ ಹದಗೆಡುತ್ತಿದೆ. ಒಂದೆಡೆ ಅಗತ್ಯ ವಸ್ತುಗಳ ಕೊರತೆ, ಇನ್ನೊಂದೆಡೆ ಲಂಕಾ ಸರ್ಕಾರದ ವಿರುದ್ಧ ದೊಡ್ಡ ಮಟ್ಟದ ಚಳವಳಿಗಳು ನಡೆಯುತ್ತಿವೆ. ಶ್ರೀಲಂಕಾದ ಹಣಕಾಸು ಸಚಿವ ಅಲಿ ಸೆರ್ಬಿ ಅವರು ಈ ಕುರಿತು ಮಾತನಾಡಿ ಲಂಕಾ ಆರ್ಥಿಕ ಕುಸಿತದಿಂದ ಪಾರಗಲು ಮುಂದಿನ ಆರು ತಿಂಗಳಲ್ಲಿ $ 3 ಶತಕೋಟಿ ಆರ್ಥಿಕ ಸಹಾಯ ಅಗತ್ಯವಿದೆ ಎಂದಿದ್ದಾರೆ. ಆಗ ಮಾತ್ರ ಇಂಧನ, ಔಷಧದಂತಹ ತುರ್ತು ಸಾಮಗ್ರಿಗಳನ್ನು ಪೂರೈಸಲು ಸಾಧ್ಯವಾಗುತ್ತದೆ ಎಂದಿದ್ದಾರೆ.
ಹಣಕಾಸು ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ಅಲಿ ಸೆರ್ಬಿ ಅವರನ್ನು ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮಾಧ್ಯಮವೊಂದು ಸಂದರ್ಶನ ಮಾಡಿದೆ.
ಸಂದರ್ಶನದಲ್ಲಿ ನಮ್ಮ ದೇಶದ ಸ್ಥಿತಿಗತಿ ಹೇಗಿದೆ ಎಂಬುದು ನಮಗೆ ತಿಳಿದಿದೆ. ನಮಗೆ ಹೋರಾಡುವುದು ಬಿಟ್ಟರೆ ಬೇರೆ ಯಾವ ದಾರಿಯೂ ಕಾಣುತ್ತಿಲ್ಲ. ಬಿಕ್ಕಟ್ಟಿನಿಂದ ಹೊರಬರಲು ಆರು ತಿಂಗಳಲ್ಲಿ $ 3 ಬಿಲಿಯನ್ ಆರ್ಥಿಕ ನೆರವು ಅಗತ್ಯವಿದೆ ಎಂದರು. ಈ ವಿಷಯವನ್ನು ಅಂತಾರಾಷ್ಟ್ರೀಯ ಹಣಕಾಸು ನಿಧಿಯೊಂದಿಗೆ ಚರ್ಚಿಸಲು ಸಿದ್ಧ ಎಂದು ಸೆರ್ಬಿ ತಿಳಿಸಿದ್ದಾರೆ.
ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್, ವಿಶ್ವಬ್ಯಾಂಕ್ ಜೊತೆಗೆ ಚೀನಾ, ಯುನೈಟೆಡ್ ಸ್ಟೇಟ್ಸ್, ಬ್ರಿಟನ್ ಮತ್ತು ಮಧ್ಯಪ್ರಾಚ್ಯದಿಂದ ಹಣಕಾಸಿನ ನೆರವು ಕೋರಲಿದ್ದೇವೆ ಎಂಬ ಮಾತನ್ನು ಹೇಳಿದರು. ಕೊರೋನಾ ಸಾಂಕ್ರಾಮಿಕ ರೋಗದ ಜೊತೆಗೆ ಸರ್ಕಾರದ ಅನಪೇಕ್ಷಿತ ನಿರ್ಧಾರಗಳಿಂದ ಶ್ರೀಲಂಕಾ ತೀವ್ರ ಸಾಲದ ಸುಳಿಯಲ್ಲಿ ಸಿಲುಕಿದೆ ಎಂದು ಬೇಸರ ಹೊರಹಾಕಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ