ರಾಮ-ಹನುಮನ ನೆಲಗಳ ಬಾಂಧವ್ಯ ಬಣ್ಣನೆ- ಮಂಡ್ಯದಲ್ಲಿ ಹೀಗಿತ್ತು ಯೋಗಿ ಮಾತಿನ ಮೋಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಬುಧವಾರ ಮಂಡ್ಯದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಭಾಗವಹಿಸಿ ಬಿಜೆಪಿ ಪರ ಪ್ರಚಾರ ನಡೆಸಿದರು. ಹನುಮನ ನಾಡು ಕರ್ನಾಟಕ ಮತ್ತು ರಾಮಜನ್ಮಭೂಮಿ ನೆಲ ಉತ್ತರಪ್ರದೇಶಗಳ ನಡುವೆ ಇರುವ ಬಂಧವನ್ನು ನೆನಪಿಸಿದ ಅವರು ಇಂಥ ಸಾಂಸ್ಕೃತಿಕ ಬಂಧದ ಆಧಾರದಲ್ಲಿ ಶ್ರೇಷ್ಠ ಭಾರತ ಕಟ್ಟುವುದಕ್ಕೆ ಬಿಜೆಪಿಯನ್ನು ರಾಜ್ಯ ವಿಧಾನಸಭೆಯಲ್ಲೂ ಬೆಂಬಲಿಸಿ ಎಂಬ ಸಂದೇಶ ನೀಡಿದರು.

ಅಷ್ಟೇ ಅಲ್ಲ, ಗೋರಖನಾಥದ ನಾಥ ಪರಂಪರೆಯ ಪ್ರತಿನಿಧಿ ಆಗಿರುವ ಆದಿತ್ಯನಾಥರು ಅದೇ ಪರಂಪರೆಯೊಂದಿಗೆ ಶ್ರದ್ಧೆ ಹಂಚಿಕೊಂಡಿರುವ ಒಕ್ಕಲಿಗ ಸಮುದಾಯದ ಮನ ಗೆಲ್ಲುವ ಪ್ರಯತ್ನವನ್ನು ಸಹ ಮಂಡ್ಯದ ನೆಲದಲ್ಲಿ ನಿಂತು ಮಾಡಿದಂತಿತ್ತು.

ಯೋಗಿ ಆದಿತ್ಯನಾಥರು ತಮ್ಮ ಭಾಷಣದಲ್ಲಿ ಹೇಳಿರುವ ಪ್ರಮುಖಾಂಶಗಳು ಹೀಗಿವೆ-

-ಆದಿಚುಂಚನಗಿರಿ ಮಠ ಇಲ್ಲಿದೆ. ಭೈರೇಶ್ವರ ಸ್ವಾಮಿ ಅಲ್ಲಿ ನೆಲೆಸಿದ್ದಾರೆ. ಕರ್ನಾಟಕ- ಉತ್ತರ ಪ್ರದೇಶದ ನಡುವಿನ ಸಂಬಂಧಗಳನ್ನು ಗಮನಿಸಿ ನನಗೆ ಸಂತಸವಾಗುತ್ತದೆ. ಪ್ರಧಾನಿ ಮೋದಿಜಿ ಅವರ ಏಕ್ ಭಾರತ್ ಶ್ರೇಷ್ಠ ಭಾರತ್ ಪರಿಕಲ್ಪನೆಯನ್ನು ಸಾಕಾರಗೊಳಿಸಲು ಬಿಜೆಪಿಗೆ ಮತ ಕೊಡಿ; ಬಿಜೆಪಿಯನ್ನೇ ಗೆಲ್ಲಿಸಿ

-ಮೋದಿಜಿ ಅವರ ಟೀಂ ಇಂಡಿಯದಲ್ಲಿ ಕರ್ನಾಟಕದ ಗರಿಷ್ಠ ಆಟಗಾರರು ಇರುವಂತೆ ನೋಡಿಕೊಳ್ಳಿ; ಇದಕ್ಕಾಗಿ ಇಲ್ಲಿನ ಅಭ್ಯರ್ಥಿಗಳನ್ನು ನೀವೆಲ್ಲರೂ ಗೆಲ್ಲಿಸಿ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರ ಸ್ಥಾಪಿಸಿ

-ಕರ್ನಾಟಕದ ಬಿಜೆಪಿ ಸರಕಾರವು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ತ್ವರಿತವಾಗಿ ಅನುಷ್ಠಾನಕ್ಕೆ ತಂದಿದೆ. ಯುವಜನರಿಗಾಗಿ ಅನೇಕ ಯೋಜನೆಗಳು ಜಾರಿಯಾಗಿವೆ.

-ಡಬಲ್ ಎಂಜಿನ್ ಸರಕಾರದಿಂದ ಸಮೃದ್ಧಿ, ಸುರಕ್ಷತೆ ಸಿಗುತ್ತದೆ. ಏಕ್ ಭಾರತ್, ಶ್ರೇಷ್ಠ ಭಾರತ್ ಪರಿಕಲ್ಪನೆಯನ್ನು ಜಾರಿ ಮಾಡಲು ಬಿಜೆಪಿಗೇ ಮತ ಕೊಡಿ. ಮೋದಿಜಿ ಟೀಂ ಇಂಡಿಯದ ಕ್ಯಾಪ್ಟನ್ ಆಗಿದ್ದಾರೆ. ಮೋದಿಜಿ ಅವರ ಟೀಂ ಇಂಡಿಯದಲ್ಲಿ ಕರ್ನಾಟಕದ ಗರಿಷ್ಠ ಆಟಗಾರರು ಇರುವಂತೆ ನೋಡಿಕೊಳ್ಳಿ. ಕಾಂಗ್ರೆಸ್ ಪಕ್ಷದ ಫೇಯಿಲ್ಡ್ ಎಂಜಿನ್ ದೂರವಿಡಿ.

-ಮಂಡ್ಯವು ಕೃಷಿ, ಕಾರ್ಖಾನೆಗಳಿಗೆ ಪ್ರಖ್ಯಾತ. ಕರ್ನಾಟಕವು ವಿಕಾಸದ ಹಾದಿಯಲ್ಲಿ ಮುನ್ನಡೆಯಲು ಕರ್ನಾಟಕದಲ್ಲೂ ಡಬಲ್ ಎಂಜಿನ್ ಸರಕಾರವನ್ನು ಮತ್ತೆ ಸ್ಥಾಪಿಸಿ. ರಾಮಜನ್ಮಭೂಮಿ ಆಂದೋಲನದಲ್ಲಿ ನೀವೂ ಪಾಲ್ಗೊಂಡಿದ್ದೀರಿ. 2024ರ ಜನವರಿಯಲ್ಲಿ ರಾಮಮಂದಿರ ಪೂರ್ಣಗೊಂಡು ಉದ್ಘಾಟನೆ ಆಗಲಿದೆ. ಇದೊಂದು ಮಹತ್ವದ ದಿನವಾಗಲಿದೆ. ನೀವೆಲ್ಲರೂ ಅಲ್ಲಿಗೆ ಬನ್ನಿ..

– ಬ್ರಿಟನ್ ದೇಶವನ್ನು ಹಿಂದಿಕ್ಕಿ ನಾವು ದೊಡ್ಡ ಆರ್ಥಿಕ ವ್ಯವಸ್ಥೆಯಾಗಿ ಹೊರಹೊಮ್ಮಿದ್ದೇವೆ. ನಮ್ಮ ದೇಶ ಮತ್ತು ನಮ್ಮ ಪ್ರಧಾನಿಯವರು ಜಗತ್ತಿನಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದಾರೆ. ಕರ್ನಾಟಕದ ಬೆಂಗಳೂರು ಐಟಿ ಕ್ಷೇತ್ರದಲ್ಲಿ ಪ್ರಮುಖ ಕೇಂದ್ರವಾಗಿದ್ದುಕೊಂಡು ಜಗತ್ತಿನಲ್ಲಿ ತನ್ನ ಛಾಪು ಮೂಡಿಸಿದೆ.

– 2014ರಲ್ಲಿ ಮೋದಿಜಿ ಅವರಿಗೆ ನಾಯಕತ್ವದ ಬಳಿಕ ಅಭಿವೃದ್ಧಿ ನಿರಂತರವಾಗಿದೆ. ಕಾಂಗ್ರೆಸ್ ಪಕ್ಷದ್ದು ಕೇವಲ ಶಿಲಾನ್ಯಾಸಗಳ ಪಂಚವಾರ್ಷಿಕ ಯೋಜನೆಯ ಸರಕಾರವಾಗಿತ್ತು. ಆದರೀಗ ಶಿಲಾನ್ಯಾಸದ ದಿನವೇ ಭವಿಷ್ಯದ ಉದ್ಘಾಟನೆಯ ದಿನವೂ ನಿಗದಿ ಆಗುತ್ತಿದೆ. ಪರಿವರ್ತನೆಯ ಯುಗ ಆರಂಭವಾಗಿದೆ.
-ಬಿಜೆಪಿಯ ಡಬಲ್ ಎಂಜಿನ್ ಸರಕಾರದ ಸುರಕ್ಷತೆ, ಅಭಿವೃದ್ಧಿಯ ಭರವಸೆ ಉತ್ತರ ಪ್ರದೇಶದಲ್ಲಿದೆ. ಪಿಎಫ್‍ಐ ಸಂಘಟನೆಯನ್ನು ನಿಷೇಧಿಸುವ ಕೆಲಸವನ್ನು ಬಿಜೆಪಿ ಮಾಡಿದೆ. ಕಾಂಗ್ರೆಸ್ ಪಕ್ಷವು ಪಿಎಫ್‍ಐ ತುಷ್ಟೀಕರಣ ಕಾರ್ಯ ಮಾಡುತ್ತಿದೆ

ರಾಜ್ಯ ನಾಯಕರ ಉಪಸ್ಥಿತಿ

ಸಚಿವರಾದ ಡಾ.ಕೆ.ಸಿ.ನಾರಾಯಣಗೌಡ, ಡಾ.ಸಿ.ಎನ್.ಅಶ್ವತ್ಥನಾರಾಯಣ್, ಸಂಸದರಾದ ಸುಮಲತಾ ಅಂಬರೀಷ್ ಅವರು ಮಾತನಾಡಿ, ಮಂಡ್ಯ ಮತ್ತು ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನಗಳನ್ನು ಗಳಿಸಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ತಿಳಿಸಿದರು. ಅತಂತ್ರ ಫಲಿತಾಂಶ ಬರಲಿ ಎಂದು ಒಂದು ಪಕ್ಷ ಕಾದು ಕುಳಿತಿದೆ ಎಂದು ಸುಮಲತಾ ಅವರು ವ್ಯಂಗ್ಯವಾಡಿದರು.
ರಾಜ್ಯದ ಸಚಿವರಾದ ಡಾ.ಕೆ.ಸಿ.ನಾರಾಯಣಗೌಡ, ಡಾ.ಸಿ.ಎನ್.ಅಶ್ವತ್ಥನಾರಾಯಣ್, ರಾಜ್ಯ ಉಪಾಧ್ಯಕ್ಷ ನಿರ್ಮಲ್‍ಕುಮಾರ್ ಸುರಾಣ, ಅಭ್ಯರ್ಥಿ ಇಂಡ್ಲವಾಡು ಸಚ್ಚಿದಾನಂದ, ಅಶೋಕ್ ಜಯರಾಂ, ಸಂಸದರಾದ ಪ್ರತಾಪಸಿಂಹ, ಸುಮಲತಾ ಅಂಬರೀಷ್, ಜಿಲ್ಲಾಧ್ಯಕ್ಷ ಉಮೇಶ್, ಸ್ಥಳೀಯ ಅಭ್ಯರ್ಥಿಗಳು, ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!