ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಫಿಯಾ ಡಾನ್ ಹಾಗೂ ರಾಜಕಾರಣಿ ಮುಖ್ತಾರ್ ಅನ್ಸಾರಿಗೆ ಜೈಲಿನಲ್ಲೇ ವಿಷವುಣಿಸಿ ಸಾಯಿಸಲಾಗಿದೆ ಎನ್ನುವ ಆರೋಪಗಳ ಬಗ್ಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಬಂಡಾ ಜೈಲಿನಲ್ಲಿದ್ದ ಮುಖ್ತಾರ್ ಅನ್ಸಾರಿ ಇತ್ತೀಚೆಗೆ ಹೃದಯಾಘಾತದಿಂದ ಸಾವು ಕಂಡಿದ್ದರು. ಮರಣೋತ್ತರ ಪರೀಕ್ಷೆಯಲ್ಲೂ ಆತ ಹೃದಯಾಘಾತದಿಂದ ಸಾವು ಕಂಡಿದ್ದಾರೆ ಎಂದು ವರದಿ ಬಂದಿತ್ತು. ಆದರೆ, ಸಮಾಜವಾದಿ ಪಕ್ಷ ನೇತೃತ್ವದಲ್ಲಿ ವಿರೋಧ ಪಕ್ಷಗಳು ಮುಖ್ತಾರ್ ಅನ್ಸಾರಿಗೆ ವಿಷ ಹಾಕಿ ಸಾಯಿಸಲಾಗಿದೆ ಎಂದು ಸರ್ಕಾರದ ಮೇಲೆ ಆರೋಪ ಮಾಡಿದ್ದರು.
ಈ ಕುರಿತು ಟಿವಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯೋಗಿ ಆದಿತ್ಯನಾಥ್, ಹಲವಾರು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.
ಉತ್ತರ ಪ್ರದೇಶದಲ್ಲಿ ಭಯದ ವಾತಾವರಣವಿಲ್ಲ. ಪ್ರೀತಿಯ ವಾತಾವರಣವಿದೆ. ರಾಮಲಲಾ ಅಯೋಧ್ಯೆಯಲ್ಲಿ ಕುಳಿತಿದ್ದಾನೆ. ನಾವು ಅವನ ಭಕ್ತರು. ರಾಮನ ಭಕ್ತನಾಗಿ ನಾವು ಕೂಡ ಅವರ ಹಾದಿಯಲ್ಲಿಯೇ ಸಾಗಬೇಕು. ಹಾಗಾಗಿ ಸಮಾಜದಲ್ಲಿ ಭಯವನ್ನು ತಂದಿದ್ದ ಕ್ರಿಮಿನಲ್‌ಗಳಿಗೆ ನ್ಯಾಯದ ವ್ಯಾಪ್ತಿಯಲ್ಲಿ ಶಿಕ್ಷೆ ನೀಡಲಾಗಿದೆ. ಇನ್ನೂ ಕೆಲವರು ಇದನ್ನು ತಾಳಲಾರದೆ ಮೇಲೆ ಹೋಗಿದ್ದಾರೆ ಎಂದರು.
ಮೊದಲಿನಿಂದಲೂ ನಮ್ಮ ಸಂಕಲ್ಪ ಉತ್ತರ ಪ್ರದೇಶವನ್ನು ಮಾಫಿಯಾ ಮುಕ್ತ ಮಾಡುವುದಾಗಿದೆ. ರಾಮಚರಿತಮಾನಸ್‌ನ ದ್ವಿಪದಿಯನ್ನು ಉಲ್ಲೇಖಿಸಿದ ಸಿಎಂ ಯೋಗಿ, ‘ಹಮ್ ತೊ ನಿಸಿಚಾರ್ ಹೀಂ ಕರುಉನ್ ಮಹಿ ಭುಜ್ ಉತಯೇ ಪನ್ ಕಿಹೆನ್. ನಾವು ‘ಸಕಲ್ ಮುನಿನ್ಹ ಕೇ ಆಶ್ರಮಹನ್ಹಿ ಜೈ ಜೈ ಸುಖ್ ದಿನ್’ (ರಾಮನು ಹೇಳಿದ್ದ, ನಾನು ಭೂಮಿಯನ್ನು ರಾಕ್ಷಸರಿಂದ ಮುಕ್ತಗೊಳಿಸುತ್ತೇನೆ, ಆಶ್ರಮಗಳಲ್ಲಿ ವಾಸಿಸುವ ಋಷಿಗಳು ಮತ್ತು ಸಂತರು ಭಯಮುಕ್ತ ವಾತಾವರಣದಲ್ಲಿ ವಾಸಿಸುತ್ತಾರೆ) ಈ ಮಾರ್ಗವನ್ನು ಅನುಸರಿಸಲಿದ್ದೇವೆ.
ಬಡವರು, ಉದ್ಯಮಿಗಳು, ಹೆಣ್ಣುಮಕ್ಕಳು, ಸಾಮಾನ್ಯ ನಾಗರಿಕರು ಮತ್ತು ರಸ್ತೆಯಲ್ಲಿ ನಡೆಯುವ ಜನರ ಸುರಕ್ಷತೆಯ ವಾತಾವರಣವನ್ನು ನಾವು ನಿರ್ಮಿಸಬೇಕಾಗಿದೆ. ಜನಸಾಮಾನ್ಯರಿಗೆ ಭಯಮುಕ್ತ ವಾತಾವರಣ ಕಲ್ಪಿಸುವುದು ನಮ್ಮೆಲ್ಲರ ಜವಾಬ್ದಾರಿ. ಅಯೋಧ್ಯೆಯಲ್ಲಿ ರಾಮ್ ಲಲಾನನ್ನು ಕೂರಿಸಿದರೆ ಸಮಾಜಕ್ಕೆ ಧಕ್ಕೆ ತರುವ ಜನರಿಗಾಗಿ ‘ರಾಮ್ ನಾಮ್ ಸತ್ಯ ಹೈ’ ಯಾತ್ರೆಯನ್ನೂ ಕೈಗೊಳ್ಳಬೇಕಾಗಿದೆ ಎಂದರು.
‘ನೋ ಬೇಲ್, ನೋ ಜೇಲ್, ಸೀದಾ ರಾಮ್ ಸೇ ಮೇಲ್’ (ಜಾಮೀನಿಲ್ಲ, ಜೈಲೂ ಇಲ್ಲ, ಸೀದಾ ರಾಮನ ಬಳಿಗೆ) ಸೂತ್ರದ ಪ್ರಶ್ನೆಗೆ ಉತ್ತರಿಸಿದ ಸಿಎಂ ಯೋಗಿ, ಎಸ್‌ಪಿ ಮತ್ತು ಕಾಂಗ್ರೆಸ್ ಮಾಫಿಯಾಗಳಿಗೆ ಬೆಂಬಲ ನೀಡುತ್ತಿವೆ ಎಂದು ಆರೋಪಿಸಿದರು. ಇಂದು ಮಾಫಿಯಾಗಳು ಹಾಗೂ ಕ್ರಿಮಿನಲ್‌ಗಳ ಸ್ಥಿತಿ ಹದಗೆಟ್ಟಿದೆ. ಅಧಿಕಾರದ ಅಹಂಕಾರದಿಂದ ಅವರ ಕಾಲದಲ್ಲಿ ಆ ಮಾಫಿಯಾಗಳ ಬೆಂಗಾವಲು ಪಡೆಗಳು ಹೊರ ಬರುತ್ತಿದ್ದಾಗಲೆಲ್ಲ ಪ್ರೊಟೋಕಾಲ್‌ಗಳೇ ಇರುತ್ತಿರಲಿಲ್ಲ. ಈಗ ಮಾಫಿಯಾವನ್ನು ಹೊರಹಾಕಿದ್ದೇವೆ. ಈಗಿನ ಸ್ಥಿತಿ ಹೇಗಿದೆ ಎಂದರೆ, ಒಬ್ಬ ಮಾಫಿಯಾ ಡಾನ್ ಸಿಕ್ಕಿಬಿದ್ದಾಗ ಆತನ ಪ್ಯಾಂಟ್ ಒದ್ದೆಯಾಗಿದ್ದನ್ನು ನೋಡಿದ್ದೇನೆ. ಒಮ್ಮ ಮಾಫಿಯಾ ಡಾನ್, ನನ್ನ ಜೀವ ಅಪಾಯದಲ್ಲಿದೆ ಎಂದು ಅರಚಾಡುತ್ತಿದ್ದ. ಆದರೆ, ಹಿಂದೊಮ್ಮೆ ಅವನ ಕಾರಣಕ್ಕಾಗಿಯೇ ಎಷ್ಟು ಜನರಿಗೆ ಭಯವಿತ್ತು ಅನ್ನೋದು ಆತನಿಗೇ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಮುಖ್ತಾರ್ ಅನ್ಸಾರಿ ಜೈಲಿನಲ್ಲಿ ಸಾವನ್ನಪ್ಪಿರುವ ಕುರಿತು ಸಿಎಂ ಯೋಗಿ ಆದಿತ್ಯನಾಥ್ ಬಿಗ್ ಸ್ಟೇಟ್‌ಮೆಂಟ್ ನೀಡಿದ್ದಾರೆ. ಆತನಿಗೆ ಜೈಲಿನಲ್ಲಿಯೇ ವಿಷ ಹಾಕಿ ಕೊಲ್ಲಲಾಗಿದೆ ಎನ್ನುವ ಆರೋಪದ ಬಗ್ಗೆ ಮಾತನಾಡಿದ ಅವರು, ‘ಆತ ಸಾಯ್ಲೇ ಬೇಕಿತ್ತಲ್ಲ..’ ಎಂದು ಹೇಳಿದ್ದಾರೆ.
ನೂರಾರು ಜನರನ್ನು ಕೊಂದ ವ್ಯಕ್ತಿ, ಹೇಗೆ ಬದುಕಿರಲು ಸಾಧ್ಯ . ಆತನನ್ನು ರಕ್ಷಣೆ ಮಾಡಲು ಕಾಂಗ್ರೆಸ್-ಸಮಾಜವಾದಿ ಪಕ್ಷ ಹರಸಾಹಸ ಪಟ್ಟವು. ಸಮಾಜವಾದಿ ಪಕ್ಷದ ನಾಯಕರೇ ಆತನ ಮಾಸ್ಟರ್‌ಗಳು. ಅದೇ ಕಾರಣಕ್ಕೆ ಇಂದು ಆತನ ಸಾವಿಗೆ ಕಂಬನಿ ಇಡುವ ಮಾತುಗಳು ಬರುತ್ತಿವೆ. ಇದೇ ವೇಳೆ ಕಲ್ಯಾಣ್ ಸಿಂಗ್ ಅವರನ್ನು ಉಲ್ಲೇಖಿಸಿದ ಯೋಗಿ ಆದಿತ್ಯನಾಥ್, ಕಟ್ಟಾ ರಾಮಭಕ್ತ ಹಾಗೂ ಮಾಜಿ ಸಿಎಂ ಕಲ್ಯಾಣ್ ಸಿಂಗ್ ಅವರು ನಿಧನರಾದಾಗ, ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷ ಒಂದೇ ಒಂದು ಸಂತಾಪ ಸೂಚನೆ ಹೇಳಿಕೆ ನೀಡೋದಿಲ್ಲ. ಅದೇ ಒಬ್ಬ ಮಾಫಿಯಾ ಡಾನ್ ಸತ್ತರೆ, ಆತನ ಮನೆಗೆ ಹೋಗಿ ಮೊಸಳೆ ಕಣ್ಣೀರು ಹಾಕುತ್ತಾರೆ. ಇದೆಲ್ಲವನ್ನೂ ಜನರು ನೋಡುತ್ತಿದ್ದಾರೆ ಎಂದರು.
ಮಾಫಿಯಾ ಡಾನ್‌ಗಳಿಂದ ವಶಪಡಿಸಿಕೊಂಡ ಆಸ್ತಿಗಳನ್ನು ಬಡವರ ಕಲ್ಯಾಣಕ್ಕಾಗಿ ಬಳಸಿಕೊಳ್ಳಲಿದ್ದೇವೆ. ಈಗಾಗಲೇ ಪ್ರಯಾಗ್ ರಾಜ್‌ನಲ್ಲಿ ಮಾಫಿಯಾ ಡಾನ್ ಅತೀಕ್ ಅಹ್ಮದ್‌ನ ಅಕ್ರಮ ಆಸ್ತಿಗಳನ್ನು ಸರ್ಕಾರ ವಶಪಡಿಸಿಕೊಂಡು ಅಲ್ಲಿ ಬಡವರಿಗೆ ಫ್ಲ್ಯಾಟ್ ನಿರ್ಮಾಣ ಮಾಡಿದೆ ಎಂದು ಯೋಗಿ ಹೇಳಿದ್ದಾರೆ.