ಸಿಎಂ ಮೊಮ್ಮಕ್ಕಳು ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ ಓದ್ತಾರೆ, ಬಡವರ ಮಕ್ಕಳ ಗತಿಯೇನು?: ಬಿ.ಸಿ. ನಾಗೇಶ್

ಹೊಸದಿಗಂತ ವರದಿ ಬೆಂಗಳೂರು:

ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ತಕ್ಷಣ ನೂತನ ಶಿಕ್ಷಣ ನೀತಿ (ಎನ್‍ಇಪಿ) ಬದಲಿಸುವ ಮಾತನಾಡಿದ್ದಾರೆ ಆದರೆ ಅದರಲ್ಲಿರುವ ಲೋಪ ದೋಷ, ಅವುಗಳನ್ನು ಬದಲಿಸುವ ಮಾತನಾಡಿಲ್ಲ. ರಾಜ್ಯ ಸರಕಾರದಲ್ಲಿ ಯಾರು ಶಿಕ್ಷಣ ಸಚಿವ ಎಂಬುದೇ ಗೊತ್ತಾಗುತ್ತಿಲ್ಲ ಎಂದು ಮಾಜಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ತಿಳಿಸಿದರು.

ವಿಧಾನಸೌಧದ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಇಂದು ಮಾತನಾಡಿದ ಅವರು, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಮಧು ಬಂಗಾರಪ್ಪ ಅವರಲ್ಲಿ ಯಾರು ಶಿಕ್ಷಣ ಸಚಿವರು? ಸರಕಾರದ ಹಿಂದಿರುವ ಬುದ್ಧಿಜೀವಿಗಳು ಶಿಕ್ಷಣ ಸಚಿವರೇ? ಅವರು ತಂದಿದ್ದನ್ನು ನಾವ್ಯಾಕೆ ಮಾಡಬೇಕ್ರಿ ಎಂಬ ಹಾರಿಕೆಯ ಉತ್ತರ ಸರಿಯಲ್ಲ ಎಂದು ಅವರು ಟೀಕಿಸಿದರು.

ಭಾರತೀಯ ಯೋಚನೆಗೆ ಅನುಗುಣವಾಗಿ ಶಿಕ್ಷಣ ಪದ್ಧತಿ ಇರಬೇಕೆಂದು ಡಾ.ಅಂಬೇಡ್ಕರ್, ನೇತಾಜಿ ಅವರು ಅನೇಕ ಬಾರಿ ಮಾತನಾಡಿದ್ದಾರೆ. ಸ್ವದೇಶಿ ಯೋಚನೆಗಳನ್ನು ತರಬೇಕೆಂದು ಮಹಾತ್ಮ ಗಾಂಧೀಜಿ ನುಡಿದಿದ್ದರು. ಶಿಕ್ಷಣ ತಜ್ಞರ ಸಮಿತಿ ಮಾಡಿ ಪಠ್ಯಕ್ರಮ, ಪಾಠದಲ್ಲಿ ಬದಲಾವಣೆ ಮಾಡಲಾಗುತ್ತಿತ್ತು. ಇದೀಗ ಕಾಂಗ್ರೆಸ್ ರಿಸರ್ಚ್ ಟೀಮಿನಿಂದ ಬಂದ ಸಲಹೆಗಳನ್ನು ಮತ್ತು ಪಾಠಗಳನ್ನು ಸೇರಿಸಲು ನಿರ್ಧರಿಸಿದ್ದಾರೆ ಎಂದು ಆರೋಪಿಸಿದರು.

ಶಿಕ್ಷಣ ಇಲಾಖೆಯಲ್ಲಿ ರಾಜಕಾರಣ:
ಶಿಕ್ಷಣ ಇಲಾಖೆಯನ್ನು ರಾಜಕೀಯಕರಣಗೊಳಿಸುತ್ತಿರುವ ರಾಜ್ಯ ಸರಕಾರವಿದು. ಎನ್‍ಇಪಿಯನ್ನು ಮೊದಲು ಓದಬೇಕು. ಅಲ್ಲಿನ ಲೋಪದೋಷಗಳನ್ನು ತಿಳಿಸಿ ಎಂದು ಆಗ್ರಹಿಸಿದರು. ಮೋದಿಜಿ ಅವರ ಸರಕಾರವು ಶ್ರೇಷ್ಠ ವಿಜ್ಞಾನಿ ಕಸ್ತೂರಿರಂಗನ್ ಅವರ ನೇತೃತ್ವದಲ್ಲಿ ಸಮಿತಿ ರಚಿಸಿದ್ದು, ಅದು 6 ವರ್ಷಗಳ ಕಾಲ ಅಧ್ಯಯನ ನಡೆಸಿ ಶಿಫಾರಸು ನೀಡಿತ್ತು. ಈ ಶಿಫಾರಸುಗಳನ್ನು ಜನರ ಮುಂದಿಡಲಾಗಿತ್ತು ಎಂದು ತಿಳಿಸಿದರು.

ಇದು ಕೆಟ್ಟ ನಿರ್ಣಯ: ಕರ್ನಾಟಕದ ಭವಿಷ್ಯ, ಇಲ್ಲಿನ ಯುವಜನರ ದೃಷ್ಟಿಯಿಂದ ಇದು ಕೆಟ್ಟ ನಿರ್ಣಯವಾಗಲಿದೆ. ಸ್ಪರ್ಧೆಯ ದೃಷ್ಟಿಯಿಂದಲೂ ಇದು ಸರಿಯಲ್ಲ ಎಂದು ಅವರು ನುಡಿದರು. ಸಿದ್ದರಾಮಯ್ಯನವರ ಮೊಮ್ಮಗನನ್ನು ಇಂಟರ್‍ನ್ಯಾಶನಲ್ ಸ್ಕೂಲಿನಲ್ಲಿ ಓದುತ್ತಿದ್ದಾರೆ. ರಾಜಕಾರಣಿಗಳ ಮಕ್ಕಳು ಸಿಬಿಎಸ್‍ಇ, ಐಸಿಎಸ್‍ಇ ಶಿಕ್ಷಣದಲ್ಲಿ ಓದಿಸುತ್ತಿದ್ದಾರೆ ಎಂದು ಅವರು ವಿವರಿಸಿದರು. ನಮ್ಮ ಬಡ ಮಕ್ಕಳು ಮೆಕಾಲೆಯ ಗುಲಾಮಿ ಶಿಕ್ಷಣ ಪದ್ಧತಿಯಡಿ ಓದಬೇಕೆಂಬ ಆಶಯ ಇವರದು ಎಂದು ಟೀಕಿಸಿದರು.

ಹಿಡನ್ ಅಜೆಂಡ : ಕರ್ನಾಟಕದ ಶೇ. 50ರಿಂದ 60ರಷ್ಟು ಖಾಸಗಿ ಶಾಲೆಗಳ ಮಾಲೀಕರು ರಾಜಕಾರಣಿಗಳು. ಸರಕಾರಿ ಶಾಲೆಗಳನ್ನು ಮುಚ್ಚಿಸುವ ಹಿಡನ್ ಅಜೆಂಡ ಅವರದಿರಬಹುದು ಎಂದ ಅವರು, ಎನ್.ಇ.ಪಿ. ಮಾತೃಭಾಷಾ ಶಿಕ್ಷಣಕ್ಕೆ ಒತ್ತು ಕೊಡುತ್ತದೆ. ಖಾಸಗಿ ಶಾಲೆಗಳಿಗೆ ಮುಂದಿನ ದಿನಗಳಲ್ಲಿ ತೊಂದರೆ ಆಗಬಹುದು ಎಂಬ ಕಾರಣಕ್ಕೆ ಹೀಗೆ ಮಾಡುತ್ತಿರಬಹುದು ಎಂದು ನುಡಿದರು.

ಆಘಾತಕಾರಿ ವಿಚಾರ: ಯಾರ ಅಭಿಪ್ರಾಯವನ್ನೂ ಪಡೆಯದೆ, ದೇಶದ ಭವಿಷ್ಯವನ್ನು ನಿರ್ಣಯಿಸುವ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ಮಾಡುತ್ತಿರುವುದು ದೇಶದ ದೃಷ್ಟಿಯಿಂದ ಮತ್ತು ಸಮಾಜದ ದೃಷ್ಟಿಯಿಂದ ಆಘಾತಕಾರಿ ವಿಚಾರ ಎಂದ ಅವರು, ಈ ರಾಜ್ಯ ಮತ್ತು ದೇಶದಲ್ಲಿ ಕಾಂಗ್ರೆಸ್ ಅನೇಕ ವರ್ಷಗಳ ಕಾಲ ಆಳ್ವಿಕೆ ನಡೆಸಿದೆ. 1968ರಲ್ಲಿ ಮೊದಲನೇ ಶಿಕ್ಷಣ ನೀತಿ, 1986ರಲ್ಲಿ ಇಂದಿರಾ ಗಾಂಧಿಯವರ ನೇತೃತ್ವದಲ್ಲಿ ಶಿಕ್ಷಣ ನೀತಿಯನ್ನು ತರಲಾಯಿತು. ಕೊಠಾರಿಯ ಆಯೋಗದ ಅಧ್ಯಯನದ ಬಳಿಕ ಅನೇಕ ಶಿಫಾರಸುಗಳನ್ನು ಮಾಡಿತ್ತು. ಶಿಕ್ಷಣ ಕ್ಷೇತ್ರದ ಕೊರತೆಗಳನ್ನು ಅಧ್ಯಯನ ಮಾಡಿ ರಾಷ್ಟ್ರೀಯ ಶಿಕ್ಷಣ ನೀತಿ ಇರಬೇಕೆಂದು ತಿಳಿಸಲಾಗಿತ್ತು. ಅಲ್ಲಿನವರೆಗೆ ರಾಜ್ಯಗಳಿಗೆ ಬೇಕಾದಂತೆ ಮೆಕಾಲೆ ಶಿಕ್ಷಣ ಪದ್ಧತಿಯನ್ನು ಅನ್ವಯಿಸಲಾಗುತ್ತಿತ್ತು ಎಂದರು.

ಶಿಫಾರಸುಗಳನ್ನು ಪಾಲಿಸಿರಲಿಲ್ಲ: ಕೊಠಾರಿಯ ಆಯೋಗವು ರಾಷ್ಟ್ರೀಯ ಶಿಕ್ಷಣ ಪಠ್ಯಕ್ರಮವನ್ನು ಶಿಫಾರಸು ಮಾಡಿತ್ತು. ರಾಷ್ಟ್ರದಾದ್ಯಂತ ಒಂದೇ ರೀತಿಯ ಪಠ್ಯಕ್ರಮದ ಕುರಿತು ತಿಳಿಸಲಾಗಿತ್ತು. ಆದರೆ, ಕಾಂಗ್ರೆಸ್ ಸರಕಾರ 1986ರ ಬಳಿಕವೂ ಕೇಂದ್ರ, ರಾಜ್ಯಗಳಲ್ಲಿ ಆಡಳಿತದಲ್ಲಿದ್ದರೂ ಆ ಶಿಫಾರಸುಗಳನ್ನು ಪಾಲಿಸಿರಲಿಲ್ಲ ಎಂದು ಅವರು ಟೀಕಿಸಿದರು.
ಅಟಲ್ ಬಿಹಾರಿ ವಾಜಪೇಯಿಯವರ ನೇತೃತ್ವದ ಕೇಂದ್ರ ಸರಕಾರವು ಈ ಶಿಫಾರಸನ್ನು ಅನುಷ್ಠಾನಕ್ಕೆ ತರುವ ಪ್ರಯತ್ನ ಮಾಡಿತ್ತು. ಅವರು ಕಾಂಗ್ರೆಸ್‍ನವರು, ಇಂದಿರಾ ಗಾಂಧಿಯವರು ಮಾಡಿದ್ದೆಂದು ಯೋಚಿಸಿರಲಿಲ್ಲ. ಅಲ್ಲಿ ಅವರು ರಾಜಕೀಯ ಮಾಡಲಿಲ್ಲ ಎಂದು ನುಡಿದರು.

ಶಿಕ್ಷಣ ಹೇಗಿರಬೇಕು: ನಂತರ ಬಂದ ಮನಮೋಹನ್ ಸಿಂಗ್ ಸರಕಾರವೂ ಅದನ್ನು ಅನುಷ್ಠಾನಕ್ಕೆ ತರುವ ಪ್ರಯತ್ನ ಮುಂದುವರೆಸಿತು. ದೇಶ, ಸಮಾಜ, ಮುಂದಿನ ಜನಾಂಗದ ದೃಷ್ಟಿಯಿಂದ ಶಿಕ್ಷಣ ಹೇಗಿರಬೇಕು ಎಂಬ ಕುರಿತು ಯೋಚನೆ ಮಾಡಿತ್ತೇ ಹೊರತು ಹಿಂದಿನ ಸರಕಾರ ಮಾಡಿದೆ; ನಾವೇಕೆ ಅದನ್ನು ಮುಂದುವರೆಸಬೇಕು ಎಂದು ಯೋಚಿಸಲಿಲ್ಲ ಎಂದು ಅವರು ತಿಳಿಸಿದರು.

ಖಾಸಗಿ ಶಿಕ್ಷಣ ಮಾಫಿಯ: ಮನಮೋಹನ್ ಸಿಂಗ್ ಸರಕಾರ ಅನುಷ್ಠಾನಕ್ಕೆ ತರಲು ಬಯಸಿದ್ದ ರಾಷ್ಟ್ರೀಯ ಪಠ್ಯಕ್ರಮವನ್ನು ಇಲ್ಲಿನ ಕಾಂಗ್ರೆಸ್ ರಾಜ್ಯ ಸರಕಾರ ಜಾರಿಗೊಳಿಸಲಿಲ್ಲ. ಯಡಿಯೂರಪ್ಪ ಅವರ ಸರಕಾರವು ಅದನ್ನು ಜಾರಿಗೊಳಿಸಲು ಮುಂದಾಗಿತ್ತು ಎಂದು ವಿವರಿಸಿದರು. ಬಿಜೆಪಿ ರಾಜ್ಯ ಸರಕಾರಗಳು ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ವಿಚಾರದಲ್ಲಿ ಯಾವತ್ತೂ ರಾಜಕೀಯ ಮಾಡಿರಲಿಲ್ಲ ಎಂದು ಅವರು ವಿಶ್ಲೇಷಿಸಿದರು. ರಾಜ್ಯ ಸರಕಾರವು ಖಾಸಗಿ ಶಿಕ್ಷಣ ಮಾಫಿಯಕ್ಕೆ ಶರಣಾದಂತಿದೆ ಎಂದು ಅವರು ಆರೋಪಿಸಿದರು. ಈ ನಿರ್ಣಯ ಅವಾಂತರಕಾರಿ; ಇದು ರಾಜ್ಯ ಮತ್ತು ಮಕ್ಕಳ ಹಿತದೃಷ್ಟಿಯಿಂದ ಒಳ್ಳೆಯದಲ್ಲ ಎಂದು ತಿಳಿಸಿದರು.
ರಾಜ್ಯದ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ವಿಧಾನಪರಿಷತ್ ಮಾಜಿ ಸದಸ್ಯ ಅರುಣ್ ಶಹಾಪುರ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!