April 17, 2026
Friday, April 17, 2026
spot_img

ಸಿಎಂ ಪುತ್ರನಿಗೆ ಎಲ್ಲವೂ ಬೇಕು, ಸ್ಥಳೀಯರಿಗೆ ಅಧಿಕಾರ ಬೇಡವೇ? ‘ಕೈ’ ವಿರುದ್ಧ ಸಾರಾ ಮಹೇಶ್ ಕಿಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಕಾಂಗ್ರೆಸ್ ಸರ್ಕಾರಕ್ಕೆ ದಮ್ಮಿಲ್ಲ, ಸೋಲಿನ ಭಯ ಅವರನ್ನು ಕಾಡುತ್ತಿದೆ ಎಂದು ಮಾಜಿ ಸಚಿವ ಸಾರಾ ಮಹೇಶ್ ಲೇವಡಿ ಮಾಡಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಸರ್ಕಾರದ ವಿರುದ್ಧ ಚಾಟಿ ಬೀಸಿದರು. ಮೈಸೂರು ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆ ನಡೆದರೆ ಕಾಂಗ್ರೆಸ್ ಧೂಳೀಪಟವಾಗುವುದು ಗ್ಯಾರಂಟಿ. ಈ ಸತ್ಯ ಮನವರಿಕೆಯಾಗಿರುವುದರಿಂದಲೇ ಸರ್ಕಾರ ಚುನಾವಣೆಯನ್ನು ಮುಂದೂಡುತ್ತಿದೆ. ಕೇವಲ ಸಿಎಂ ಮತ್ತು ಅವರ ಪುತ್ರ ಮಾತ್ರ ಅಧಿಕಾರದಲ್ಲಿದ್ದರೆ ಸಾಲದು, ಸ್ಥಳೀಯ ಮಟ್ಟದ ನಾಯಕರಿಗೂ ಅಧಿಕಾರ ಸಿಗಬೇಕು ಎಂದು ಆಕ್ರೋಶ ಹೊರಹಾಕಿದರು.

ಜಿ.ಟಿ. ದೇವೇಗೌಡರ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, “ಜಿಟಿಡಿ ನಮ್ಮ ಪಕ್ಷದಲ್ಲಿ ಇಲ್ಲ ಎಂದು ಕುಮಾರಸ್ವಾಮಿ ಅವರೇ ಸ್ಪಷ್ಟಪಡಿಸಿದ್ದಾರೆ. ಅಲ್ಲಿಗೆ ಆ ಅಧ್ಯಾಯ ಮುಗಿಯಿತು. ಅವರ ಬಗ್ಗೆ ನಮಗೆ ಯಾವುದೇ ಚರ್ಚೆ ಬೇಡ” ಎನ್ನುವ ಮೂಲಕ ಅಂತರ ಕಾಯ್ದುಕೊಂಡರು. ಅಲ್ಲದೆ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ‘ಜನರೊಂದಿಗೆ ಜನತಾದಳ’ ಕಾರ್ಯಕ್ರಮದ ಸಮಾರೋಪವನ್ನು ಅದ್ದೂರಿಯಾಗಿ ಮಾಡುವುದಾಗಿ ತಿಳಿಸಿದರು.

ಡಾ. ಯತೀಂದ್ರ ಅವರ ‘ನಮ್ಮದು ಕುಟುಂಬ ರಾಜಕಾರಣ ಅಲ್ಲ’ ಎಂಬ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ ಸಾರಾ ಮಹೇಶ್, “ವಿಧಾನ ಪರಿಷತ್ ಸದಸ್ಯರಾಗಿ, ಆಶ್ರಯ ಸಮಿತಿ ಹಾಗೂ ಗ್ರೇಟರ್ ಬೆಂಗಳೂರು ಸಮಿತಿಯಲ್ಲಿ ಯತೀಂದ್ರ ಅವರೇ ಇದ್ದಾರೆ. ಇದಕ್ಕಿಂತ ಬೇರೆ ಕುಟುಂಬ ರಾಜಕಾರಣ ಬೇಕೇ?” ಎಂದು ಪ್ರಶ್ನಿಸಿದರು.

“ಜೆಡಿಎಸ್‌ಗೆ ಪಕ್ಷವೇ ಒಂದು ಕುಟುಂಬ” ಎಂದು ಸಮರ್ಥಿಸಿಕೊಂಡ ಅವರು, ಪಕ್ಷದಲ್ಲಿ ಬೆಳೆದು ಪಕ್ಷಕ್ಕೇ ದ್ರೋಹ ಮಾಡುವವರು ಹೆಚ್ಚಾಗಿದ್ದಾರೆ. ಆದ್ದರಿಂದಲೇ ಹೆಚ್.ಡಿ. ದೇವೇಗೌಡರ ಕುಟುಂಬದವರನ್ನು ನಂಬಿ ಬೆಳೆಸುತ್ತಿದ್ದೇವೆ ಎಂದು ತಮ್ಮ ನಿಲುವನ್ನು ಸಮರ್ಥಿಸಿಕೊಂಡರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !