ಹೊಸದಿಗಂತ ವರದಿ, ಮಡಿಕೇರಿ:
ನ್ಯಾಯಾಲಯ ಮತ್ತು ಪ್ರಜಾಸತ್ತಾತ್ಮಕ ಸಂಸ್ಥೆಗಳಲ್ಲಿ ಕೊಡವ ಭಾಷೆಯನ್ನು ಅನುಷ್ಠಾನಕ್ಕೆ ತರಬೇಕೆಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್(ಸಿಎನ್ ಸಿ) ಸಂಘಟನೆ ನಗರದಲ್ಲಿ ಶಾಂತಿಯುತ ಧರಣಿ ಸತ್ಯಾಗ್ರಹ ನಡೆಸುವ ಮೂಲಕ ಸರಕಾರದ ಗಮನ ಸೆಳೆಯಿತು.
ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಿದ ಪ್ರಮುಖರು, ಸಂವಿಧಾನದ 347, 350, 350ಎ ಮತ್ತು 350ಬಿ ವಿಧಿಗಳಡಿಯಲ್ಲಿ ಕೊಡವರ ಮಾತೃಭಾಷೆಯಾಗಿರುವ ಕೊಡವ ಭಾಷೆಯನ್ನು ಆಡಳಿತದಲ್ಲಿ ಅಳವಡಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಏ.30 ರಂದು ದೆಹಲಿಯಲ್ಲಿ ನಡೆದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಎಲ್ಲಾ ರಾಜ್ಯಗಳ ಹೈಕೋರ್ಟ್’ಗಳ ಮುಖ್ಯ ನ್ಯಾಯಾಧೀಶರುಗಳ ಸಭೆಯಲ್ಲಿ ದೇಶದ ನ್ಯಾಯಾಲಯಗಳು ಮತ್ತು ಇತರ ಪ್ರಜಾಪ್ರಭುತ್ವ ಸಂಸ್ಥೆಗಳಲ್ಲಿ ಸ್ಥಳೀಯ ಭಾಷೆಗಳಿಗೆ ಆದ್ಯತೆ ನೀಡಬೇಕೆಂದು ಪ್ರಧಾನಿ ನರೇಂದ್ರಮೋದಿ ಹಾಗೂ ಸಿಜೆ ಎನ್.ವಿ.ರಮಣ ಅವರು ಕರೆ ನೀಡಿದ್ದರು.
ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗ ಈ ಮೂರು ಅಂಗಗಳು ನಮ್ಮ ಸಾಂವಿಧಾನಿಕ ಪ್ರಜಾಪ್ರಭುತ್ವದ ಆಧಾರ ಸ್ತಂಭಗಳಾಗಿದ್ದು, ಇದರಲ್ಲಿ ಎರಡು ಸ್ತಂಭಗಳ ಮುಖ್ಯಸ್ಥರಾದ ಪ್ರಧಾನಮಂತ್ರಿ ಹಾಗೂ ಸಿಜೆಐ ನ್ಯಾಯಾಂಗ ಮತ್ತು ದೇಶದ ಇತರ ಪ್ರಜಾಪ್ರಭುತ್ವ ಸಂಸ್ಥೆಗಳಲ್ಲಿ ಸ್ಥಳೀಯ ಭಾಷೆಗಳ ಅನುಷ್ಠಾನಕ್ಕಾಗಿ ಬಲವಾಗಿ ಪ್ರತಿಪಾದಿಸಿರುವುದು ಶ್ಲಾಘನೀಯ. ಆಡಳಿತ ಮತ್ತು ಪಠ್ಯಕ್ರಮದಲ್ಲಿ ಕೊಡವ ಭಾಷೆಯನ್ನು ಸೇರಿಸುವುದು ಕಡ್ಡಾಯವಾಗಿದೆ. ಆದರೆ ಕರ್ನಾಟಕ ರಾಜ್ಯದ ಆಡಳಿತ ವ್ಯವಸ್ಥೆ 1956ರ ರಾಜ್ಯ ಮರುಸಂಘಟನೆ ಕಾಯಿದೆಯನ್ನು ಉಲ್ಲಂಘಿಸುತ್ತಾ ಬಂದಿದೆ. ನಿರಂತರವಾಗಿ ಕೊಡವ ಜನಾಂಗದ ಮೇಲೆ ತಮ್ಮ ಜನಾಂಗೀಯ ಪ್ರಾಬಲ್ಯವನ್ನು ಹೇರುತ್ತಾ ಬರಲಾಗಿದೆ ಎಂದು ಆರೋಪಿಸಿದರು.
ಭೌಗೋಳಿಕ ಮತ್ತು ರಾಜಕೀಯ ಸ್ವಾಯತ್ತತೆಗಾಗಿ ಸಂವಿಧಾನದ 8 ನೇ ಶೆಡ್ಯೂಲ್‍ನಲ್ಲಿ ಕೊಡವ ಮಾತೃಭಾಷೆಯನ್ನು ಸೇರಿಸಬೇಕು. ರಾಜ್ಯಗಳ ಮರುಸಂಘಟನೆ ಕಾಯಿದೆ 1956 ರಲ್ಲಿ ತೆಗೆದುಕೊಂಡ ನಿರ್ಧಾರದಂತೆ 3 ನೇ ಭಾಷೆಯಾಗಿ ಕೊಡವ ಭಾಷೆಯನ್ನು ಪರಿಗಣಿಸುವ ಅಗತ್ಯವಿದೆ ಎಂದು ತಿಳಿಸಿದ ನಾಚಪ್ಪ, ಕೊಡವ ಜನಾಂಗದ ಅದಮ್ಯ ಧ್ವನಿಯಾಗಿ ಸಿಎನ್‍ಸಿ ಸಂಘಟನೆ ಅವಿರತವಾಗಿ ಶ್ರಮಿಸುತ್ತಿದೆ ಎಂದರು.
ಭಾಷಾ ಬೆಳವಣಿಗೆ ವಿಚಾರದಲ್ಲಿ ಪ್ರಧಾನಮಂತ್ರಿ ಮತ್ತು ಸಿಜೆ ಅವರು ತೋರಿದ ಕಾಳಜಿ ನಮ್ಮ ಹೋರಾಟಕ್ಕೆ ಹೊಸ ಸ್ಫೂರ್ತಿಯನ್ನು ತುಂಬಿದಂತಾಗಿದೆ ಎಂದೂ ನಾಚಪ್ಪ ತಿಳಿಸಿದರು.
ಸಿಎನ್‍ಸಿ ಪ್ರಮುಖರಾದ ಅಜ್ಜಿನಿಕಂಡ ಇನಿತಾ ಮಾಚಯ್ಯ, ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ಪಟ್ಟಮಾಡ ಲಲಿತಾ ಗಣಪತಿ, ಚೋಳಪಂಡ ಜ್ಯೋತಿ ನಾಣಯ್ಯ, ಲೆಫ್ಟಿನೆಂಟ್ ಕರ್ನಲ್ ಬಿ.ಎಂ.ಪಾರ್ವತಿ, ಕಲಿಯಂಡ ಪ್ರಕಾಶ್, ಬಾಚರಣಿಯಂಡ ಚಿಪ್ಪಣ್ಣ, ಅಜ್ಜಿಕುಟೀರ ಲೋಕೇಶ್, ಪುಟ್ಟಿಚಂಡ ದೇವಯ್ಯ, ಕೂಪದೀರ ಸಾಬು, ನಂದಿನೆರವಂಡ ವಿಜು, ಪಟ್ಟಮಾಡ ಕುಶ, ಪುದಿಯೊಕ್ಕಡ ಕಾಶಿ, ಬಡುವಂಡ ವಿಜಯ, ಚೋಳಪಂಡ ನಾಣಯ್ಯ, ಅಜ್ಜಿನಂಡ ಪಾಪಣ್ಣ, ಕಾಟುಮಣಿಯಂಡ ಉಮೇಶ್, ನಂದಿನೆರವಂಡ ಅಯ್ಯಣ್ಣ, ಮೇದುರ ಕಂಠಿ, ಅಪ್ಪಾರಂಡ ಪ್ರಸಾದ್, ಅಪ್ಪನೆರವಂಡ ಕಿರಣ್, ಅರೆಯಡ ಗಿರೀಶ್, ಚಂಬಂಡ ಜನತ್, ಕಿರಿಯಮಾಡ ಶೆರಿನ್, ಮಣವಟ್ಟೀರ ಚಿನ್ನಪ್ಪ ಮತ್ತಿತರರು ಧರಣಿಯಲ್ಲಿ ಪಾಲ್ಗೊಂಡು ಕೊಡವ ಲ್ಯಾಂಡ್ ಮತ್ತು ಕೊಡವ ಭಾಷೆ ಪರ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
ಅಪರ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ ಅವರ ಮೂಲಕ ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ