Wednesday, February 1, 2023

Latest Posts

ಕೊಡವ ಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆಗಾಗಿ ಸಿಎನ್‍ಸಿ ಧರಣಿ

ಹೊಸದಿಗಂತ ವರದಿ, ಮಡಿಕೇರಿ:

ಕೊಡವ ಜನಾಂಗವನ್ನು ರಾಷ್ಟ್ರದ ಇತರ ನಾಗರಿಕರಿಗೆ ಸಮಾನವಾಗಿ ಪರಿಗಣಿಸುವ ಮೂಲಕ ಕೊಡವ ತಾಯ್ನಾಡು ಮತ್ತು ಕೊಡವರ ಭಾವನೆಗಳನ್ನು ಗೌರವಿಸಬೇಕು. ಇದಕ್ಕಾಗಿ ಕೊಡವ ಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆಯನ್ನು ರೂಪಿಸಲು ಸಂವಿಧಾನಕ್ಕೆ ತಿದ್ದುಪಡಿ ತರುವ ಕಾರ್ಯವಿಧಾನಕ್ಕೆ ತ್ವರಿತವಾಗಿ ಚಾಲನೆ ನೀಡಬೇಕೆಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿತು.
ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ ಧರಣಿ ನಡೆಸಿದ ಸಂಘಟನೆಯ ಪ್ರಮುಖರು “ಕೊಡವ ಲ್ಯಾಂಡ್” ಪರ ಘೋಷಣೆಗಳನ್ನು ಕೂಗಿದರು.
ಸರ್ಕಾರಗಳು ಅತಿ ಸೂಕ್ಷ್ಮ ಕೊಡವ ಬುಡಕಟ್ಟು ಜನಾಂಗವನ್ನು ಸಮಾನ ನಾಗರಿಕರಂತೆ ಪರಿಗಣಿಸಬೇಕು ಮತ್ತು ತಾಯ್ನಾಡನ್ನು ಇತರ ಭಾಷಾವಾರು ರಾಜ್ಯಗಳಂತೆ ಗೌರವಯುತವಾಗಿ ಕಾಣಬೇಕು. ಆದರೆ ದುಃಖಕರ ವಿಚಾರವೆಂದರೆ ಸರ್ಕಾರಗಳು ಕೊಡವ ಪ್ರದೇಶವನ್ನು ತಮ್ಮ ಸಂಪನ್ಮೂಲ ಉತ್ಪಾದಿಸುವ ಆಕ್ರಮಿತ ಕಾಲೋನಿ ಎಂದು ಪರಿಗಣಿಸುತ್ತಿವೆ ಎಂದು ನಾಚಪ್ಪ ಬೇಸರ ವ್ಯಕ್ತಪಡಿಸಿದರು.
ಸಾಂವಿಧಾನಿಕ ಸಂಸದೀಯ ಸಹಭಾಗಿತ್ವದ ಪ್ರಜಾಪ್ರಭುತ್ವದಲ್ಲಿ ಸಿಎನ್‍ಸಿ ಸಂಘಟನೆ ಹಾಗೂ ಕೊಡವರು ಯಾವುದೇ ಜಾಗ ಅಥವಾ ಸಮಾನ ಪಾಲು ಕೇಳುತ್ತಿಲ್ಲ. ಬದಲಿಗೆ ಸಂವಿಧಾನದ 3ನೇ ವಿಧಿಯ ಅನುಷ್ಠಾನಕ್ಕೆ ಮನವಿ ಮಾಡಿಕೊಳ್ಳುತ್ತಿದೆ. ಬುಡಕಟ್ಟು ಜನಾಂಗವಾಗಿರುವ ಕೊಡವರ ಹಕ್ಕುಗಳಿಗೆ ಭದ್ರತೆ ನೀಡಲು ಆಡಳಿತ ವರ್ಗ ಮುಂದಾಗುವ ಮೂಲಕ ತನ್ನ ಮನೋಸ್ಥಿತಿಯನ್ನು ಬದಲಾಯಿಸಿಕೊಳ್ಳಬೇಕು ಎಂದು ತಿಳಿಸಿದ ಅವರು, ಕಾನೂನುಬದ್ಧ ಆಶೋತ್ತರಗಳು ಮತ್ತು ಗೌರವಾನ್ವಿತ ಗುರಿಗಳನ್ನು ತಿಳಿಸಲು ಸಿಎನ್‍ಸಿ ನಿರಂತರ ಧರಣಿಗಳನ್ನು ನಡೆಸುತ್ತಿರುವುದಾಗಿ ತಿಳಿಸಿದರು.
ಭೂಮಿ ಸೃಷ್ಟಿಯಾದಾಗಲೇ ಕೊಡವ ಜನಾಂಗದ ಸಾಂಪ್ರದಾಯಿಕ ಮತ್ತು ಅವಿಭಾಜ್ಯ ತಾಯ್ನಾಡು ಕೊಡವಲ್ಯಾಂಡ್ ಅಸ್ತಿತ್ವದಲ್ಲಿದ್ದು, ಪವಿತ್ರ ಕಾವೇರಿ ನದಿಯ ಎರಡೂ ಬದಿಯಲ್ಲಿ ಕೊಡವರು ವಿಕಸನಗೊಂಡಿದ್ದಾರೆ. ಆದರೆ 1956ರ ರಾಜ್ಯ ಮರು-ಸಂಘಟನೆ ಕಾಯಿದೆಯಡಿಯಲ್ಲಿ ವಿಶಾಲ ಮೈಸೂರಿನೊಂದಿಗೆ ಕೂರ್ಗ್ ವಿಲೀನಗೊಂಡು ನಮ್ಮೆಲ್ಲ ಭರವಸೆಗಳು ಮತ್ತು ಆಕಾಂಕ್ಷೆಗಳು ಛಿದ್ರಗೊಂಡವು ಎಂದು ಅವರು ವಿಷಾದಿಸಿದರು.
ಕೊಡವಲ್ಯಾಂಡ್‍ಗೆ ಭೌಗೋಳಿಕ- ರಾಜಕೀಯ ಸ್ವಾಯತ್ತತೆಯನ್ನು ರಚಿಸುವ ಮೂಲಕ ರಾಷ್ಟ್ರ ಮತ್ತು ವಿಶ್ವ ಶಾಂತಿಗಾಗಿ ಕೊಡವರು ಪ್ರಾಣತ್ಯಾಗ ಮಾಡಿದ ಸತ್ಯವನ್ನು ಒಪ್ಪಿಕೊಳ್ಳಬೇಕು. ಸಂವಿಧಾನದ ಆರ್ಟಿಕಲ್ 244(ಎ) ಆರ್/ಡಬ್ಲ್ಯೂ 6ನೇ ಮತ್ತು 8ನೇ ಶೆಡ್ಯೂಲ್ ಅಡಿಯಲ್ಲಿ ಕೊಡವಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆಯನ್ನು ಆಂತರಿಕ ಸ್ವಯಂ-ನಿರ್ಣಯ ಅಧಿಕಾರದ ಹಕ್ಕಿನೊಂದಿಗೆ ರೂಪಿಸಬೇಕು. ಅತೀ ಸೂಕ್ಷ್ಮಾತಿ ಸೂಕ್ಷ್ಮ ಮೈಕ್ರೋ ಕೊಡವ ರೇಸ್ ಅನ್ನು ಎಸ್‍ಟಿ ಪಟ್ಟಿಯಲ್ಲಿ ಸೇರಿಸಬೇಕು. ಕೊಡವ ಜನಾಂಗೀಯ “ಸಂಸ್ಕಾರ ಗನ್” ಹಕ್ಕನ್ನು ಸಂವಿಧಾನದ 25 ಮತ್ತು 26 ನೇ ವಿಧಿಗಳಡಿಯಲ್ಲಿ ಅನುಮೋದಿಸಬೇಕು ಎಂದು ಒತ್ತಾಯಿಸಿದರು.
ಕೂರ್ಗ್’ನ ಆದಿಮಸಂಜಾತ ಮೂಲನಿವಾಸಿ ಕೊಡವ ಜನಾಂಗವನ್ನು ಹೊಸ ಮರು-ವ್ಯಾಖ್ಯಾನಿತ ಮಾನದಂಡಗಳ ಪ್ರಕಾರ ನಮ್ಮ ಸಂವಿಧಾನದ ಶೆಡ್ಯೂಲ್ ಪಟ್ಟಿಯಲ್ಲಿ ಸೇರಿಸಬೇಕು. ಕೊಡವ ತಕ್ಕ್ ಅನ್ನು 8ನೇ ಶೆಡ್ಯೂಲ್‍ಗೆ ಸೇರಿಸಬೇಕು. 347, 350, 350ಎ ಮತ್ತು 350ಬಿ ಅಡಿಯಲ್ಲಿ ಕೊಡವ ತಕ್ಕ್ ನ್ನು ಪಠ್ಯಕ್ರಮ ಮತ್ತು ಆಡಳಿತದಲ್ಲಿ ಪರಿಚಯಿಸಬೇಕು.
ಕೊಡವ ಸಂಸ್ಕೃತಿ-ಜಾನಪದ ಪರಂಪರೆಯನ್ನು ಯುನೆಸ್ಕೋದ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪಟ್ಟಿಯಲ್ಲಿ ಸೇರಿಸಬೇಕು. ಕೊಡವ ಸುಧಾರಿತ ಅಧ್ಯಯನ ಕೇಂದ್ರದ ಜೊತೆಗೆ ವಿಶ್ವ ಕೊಡವಾಲಜಿ ಅಧ್ಯಯನ ಕೇಂದ್ರವನ್ನು ಸ್ಥಾಪಿಸಬೇಕು. ಜಲದೇವತೆ ಕಾವೇರಿಯ ಜನ್ಮ ಸ್ಥಳವನ್ನು ಯಹೂದಿ ಜನರ ಟೆಂಪಲ್ ಮೌಂಟ್ ಮೊರೈಯಾ ಮಾದರಿಯಲ್ಲಿ ಕೊಡವ ಜನಾಂಗದ ಪವಿತ್ರ ತೀರ್ಥಯಾತ್ರಾ ಕೇಂದ್ರ ಎಂದು ಸರ್ಕಾರ ಪರಿಗಣಿಸಬೇಕು. ಅರಮನೆಯ ಸಂಚಿನಲ್ಲಿ ನಡೆದ ರಾಜಕೀಯ ಹತ್ಯೆಗಳ ಕುರಿತು ನಾಲ್ನಾಡ್ ಅರಮನೆ ಮತ್ತು ಮಡಿಕೇರಿ ಕೋಟೆಯಲ್ಲಿ ಹಾಗೂ ಕೊಡವ ಶೌರ್ಯವನ್ನು ಪ್ರತಿಬಿಂಬಿಸುವ ಉಲುಗುಲಿ-ಸುಂಟಿಕೊಪ್ಪ ಮತ್ತು ಮುಳ್ಳುಸೋಗೆಯಲ್ಲಿ ಯುದ್ಧ ಸ್ಮಾರಕ ನಿರ್ಮಾಣ ಮಾಡಬೇಕು. ಸಂವಿಧಾನದ 49 ನೇ ವಿಧಿ ಮತ್ತು 1964 ರ ವೆನಿಸ್ ಘೋಷಣೆಯಡಿಯಲ್ಲಿ ದೇವಾಟ್‍ಪರಂಬ್‍ನಲ್ಲಿ ಅಂತರರಾಷ್ಟ್ರೀಯ ಕೊಡವ ನರಮೇಧದ ಸ್ಮಾರಕ ನಿರ್ಮಾಣಕ್ಕೆ ಮುಂದಾಗಬೇಕು ಎಂದು ನಾಚಪ್ಪ ಒತ್ತಾಯಿಸಿದರು.
ಧರಣಿ ನಿರತರು ಸಿಎನ್‍ಸಿ ಯ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಅಪರ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ ಅವರಿಗೆ ಸಲ್ಲಿಸಿದರು.
ಸಿಎನ್‍ಸಿ ಮಹಿಳಾ ಹಾಗೂ ಪುರುಷ ಸ್ವಯಂಸೇವಕರು ಧರಣಿಯಲ್ಲಿ ಪಾಲ್ಗೊಂಡಿದ್ದರು.
ಕೇಂದ್ರ ಗೃಹ ಮಂತ್ರಿ ಅಮಿತ್ ಶಾ, ಕೇಂದ್ರ ಕಾನೂನು ಮಂತ್ರಿ ಕಿರಣ್ ರಿಜಿಜು, ಅರ್ಥಶಾಸ್ತ್ರಜ್ಞ ಮತ್ತು ಕೇಂದ್ರದ ಮಾಜಿ ಕಾನೂನು ಮಂತ್ರಿ ಡಾ.ಸುಬ್ರಮಣ್ಯನ್ ಸ್ವಾಮಿ ಹಾಗೂ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನಾಚಪ್ಪ ಅವರು ಜಿಲ್ಲಾಡಳಿತದ ಮೂಲಕ ಮನವಿ ಪತ್ರವನ್ನು ಸಲ್ಲಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!