ಹಾರುತ್ತಿದ್ದ ವಿಮಾನದಲ್ಲಿ ನಾಗರಹಾವು ಪ್ರತ್ಯಕ್ಷ: ತುರ್ತು ಭೂಸ್ಪರ್ಶ ಬೆನ್ನಲ್ಲೇ ಹೊರ ಓಡಿದ ಪ್ರಯಾಣಿಕರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ದಕ್ಷಿಣ ಆಫ್ರಿಕಾದಲ್ಲಿ ಹಾರುತ್ತಿದ್ದ ವಿಮಾನದಲ್ಲಿ ನಾಗರಹಾವೊಂದು (Snake On Plane) ಪತ್ತೆಯಾಗಿದ್ದು, ಎಚ್ಚೆತ್ತ ಪೈಲಟ್‌ ಕೂಡಲೇ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿದ್ದಾರೆ.

ಆಫ್ರಿಕಾದ ಬ್ಲೊಂಫೊಂಟೀನ್‌ ಹಾಗೂ ಪ್ರಿಟೋರಿಯಾ ಮಧ್ಯೆ ಸುಮಾರು 11 ಸಾವಿರ ಅಡಿ ಎತ್ತರದಲ್ಲಿ ವಿಮಾನ ಹಾರಾಟ ನಡೆಸುತ್ತಿತ್ತು. ಇದೇ ವೇಳೆ ಪೈಲಟ್‌ ರುಡಾಲ್ಫ್‌ ಎರಾಸ್ಮಸ್‌ಗೆ ಏನೋ ತಣ್ಣಗಿನ ವಸ್ತು ಸ್ಪರ್ಶವಾದ ಅನುಭವವಾಗಿದೆ. ನೀರೇನಾದರೂ ಚೆಲ್ಲಿರಬೇಕು ಎಂದು ಭಾವಿಸಿದ ಅವರು ಸೀಟಿನ ಕೆಳಗೆ ನೋಡಿದ್ದಾರೆ. ನಾಗರ ಹಾವೊಂದು ಮಲಗಿದ್ದನ್ನು ನೋಡಿ ಎದೆ ಧಸಕ್‌ ಎಂದಿದೆ. ಆದರೂ, ಗಲಿಬಿಲಿಗೊಳ್ಳದ ಅವರು ಕೂಡಲೇ ವಿಮಾನವನ್ನು ಲ್ಯಾಂಡ್‌ ಮಾಡಿದ್ದಾರೆ.

ನಾನು ಮೊದಲಿಗೆ ನೀರು ಚೆಲ್ಲಿರಬೇಕು ಇಲ್ಲವೇ ನೀರಿನ ಬಾಟಲಿ ಇರಬೇಕು ಎಂದು ಅಂದುಕೊಂಡಿದ್ದೆ. ಆದರೆ, ಯಾವಾಗ ಪೈಲಟ್‌ ಸೀಟಿನ ಕೆಳಗೆ ನೋಡಿದೆನೋ, ಒಂದು ಕ್ಷಣ ದಂಗಾದೆ. ಪುಣ್ಯಕ್ಕೆ ಹಾವು ಮಲಗಿತ್ತು. ಅದು ಅಲುಗಾಡುತ್ತಿರಲಿಲ್ಲ. ಕೂಡಲೇ ನಾನು ವಿಮಾನವನ್ನು ಲ್ಯಾಂಡ್‌ ಮಾಡಿದೆ. ಇದು ನನ್ನ ಪೈಲಟ್‌ ವೃತ್ತಿ ಜೀವನದಲ್ಲಿಯೇ ಅತ್ಯಂತ ವಿಶೇಷ ಹಾಗೂ ಭಯಂಕರ ಅನುಭವವಾಗಿದೆ ಎಂದು ಹೇಳಿದ್ದಾರೆ.

ಇತ್ತ ವಿಮಾನ ಲ್ಯಾಂಡ್‌ ಆಗುತ್ತಲೇ ಜನ ಗಡಿಬಿಡಿಯಿಂದ ಹೊರಗೆ ಬಂದಿದ್ದಾರೆ. ಬಳಿಕ ಎಷ್ಟು ಹೊತ್ತು ಹುಡುಕಾಡಿದರೂ ಹಾವು ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!