October 29, 2026
Thursday, October 29, 2026
spot_img

ಜೆನ್‌ಝಿಗಳ ಹೆಸರಿನಲ್ಲಿ ಕಾಕ್ರೋಚ್‌ ಜನತಾ ಪಾರ್ಟಿ ದೊಂಬಿ ಸೃಷ್ಟಿಸುತ್ತಿದೆ: ಶ್ರೀರಾಮುಲು

ಹೊಸದಿಗಂತ ವರದಿ ಯಾದಗಿರಿ:

ಕಾಕ್ರೋಚ್ ಜನತಾ ಪಾರ್ಟಿ ದೆಹಲಿ ಹಾಗೂ ಬೆಂಗಳೂರಿನಲ್ಲಿ ಕಾನೂನು ಬಾಹಿರ ಹೋರಾಟ ನಡೆಸುವ ಮೂಲಕ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಗೊಳಿಸಿದ್ದು ಇದು ವ್ಯವಸ್ಥಿತ ಷಡ್ಯಂತ್ರವಾಗಿದೆ. ನಾವು ಜೆನ್‌ಝಿಗಳು ಎಂದು ಇವರು ಹೇಳಿಕೊಳ್ಳುತ್ತಾರೆ. ಆದರೆ ಯಾವ ಕಾರಣಕ್ಕೂ ಇವರು ಜೆನ್‌ಝಿಗಳಂತೂ ಅಲ್ಲ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಆರೋಪಿಸಿದರು.

ಕಾಕ್ರೋಚ್ ಜನತಾ ಪಾರ್ಟಿಯವರು ತಾವು ಜೆನ್‌ಝಿಗಳು ಎಂದು ಹೇಳಿಕೊಂಡು ಸಮಾಜದಲ್ಲಿ ದೊಂಬಿ ಸೃಷ್ಠಿಸಲು ಮುಂದಾಗಿದ್ದಾರೆ. ಅವರಿಗೆ ಕಾಂಗ್ರೆಸ್ ನ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಸಹ ಬೆಂಬಕವಾಗಿ ನಿಂತಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಚುನಾವಣಾ ಅಯೋಗ ತನ್ನ ಕೆಲಸ ತಾನು ಮಾಡುತ್ತಿದೆ. ಸರ್ಕಾರದ ತನಿಖಾ ಸಂಸ್ಥೆಗಳು ಕೇಂದ್ರ. ಸರ್ಕಾರದಲ್ಲಿ ಇಂದು ಸ್ವಾತಂತ್ರ್ಯವಾಗಿ ಕಾರ್ಯ ನಿರ್ವಹಿಸುತ್ತಿವೆ. ಎಸ್ಐಆರ್ ಆಗಿರಬಹುದು, ಇಡಿ ಹೀಗೆ ಎಲ್ಲರ ಮೇಲೂ ಕಾಂಗ್ರೆಸ್ ಮತ್ತು ಅದರ ಮಿತ್ರ ಸಂಸ್ಥೆಗಳು ಅನುಮಾನದ ದೃಷ್ಠಿ ಇಟ್ಟುಕೊಂಡು ಸಾರ್ವಜನಿಕರಲ್ಲಿ ಗೊಂದಲ ಸೃಷ್ಠಿ ಮಾಡುತ್ತಿವೆ ಎಂದು ಅರೋಪಿಸಿದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ನಮಗೆ ಗೌರವವಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಅವರು ವಿಚಿತ್ರವಾಗಿ ಮಾತನಾಡುತ್ತಿದ್ದಾರೆ. ದೇಶದ ಪ್ರಧಾನಿ ತಂದೆಯ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ರಾಜ್ಯದಲ್ಲಿ ಅವರ ಪುತ್ರ ಸಚಿವ ಪ್ರಿಯಾಂಕ್ ಖರ್ಗೆ ಮಾತೆತಿದ್ದರೆ ಆರ್ ಎಸ್ ಎಸ್ ಬಗ್ಗೆ ಅವಹೇಳನ ಮಾಡುತ್ತಿದ್ದಾರೆ. ಪ್ರಿಯಾಂಕ್ ಗೃಹ ಸಚಿವರಾದ ಮೇಲೆ ಲಾಂಗ್,ಮಚ್ಚುಗಳ ಬೇಡಿಕೆ ಹೆಚ್ಚಾಗಿದೆ.‌ ಕಲಬುರಗಿಯಲ್ಲಿ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಕಾಂಗ್ರೆಸ್ಸನ್ನು ಮನೆಗೆ ಕಳುಹಿಸಲು ನಾವು ಬೇಕಿಲ್ಲ.‌ ದೊಡ್ಡ ಖರ್ಗೆ ಹಾಗೂ ಮರಿ ಖರ್ಗೆ ಅವರಿಂದಲೇ ಕಾಂಗ್ರೆಸ್ಸಿಗೆ ಕೊನೆ ಮೊಳೆ ಹೊಡೆಯಲಿದ್ದಾರೆ ಎಂದು ಸಚಿವ ರಾಮುಲು ವ್ಯಂಗ್ಯವಾಡಿದರು.

Must Read