May 16, 2026
Saturday, May 16, 2026
spot_img

ಮಳೆಯಲ್ಲಿ ಮಿಂದೆದ್ದ ಕಾಫಿ ನಾಡು: ಒಂದೆಡೆ ರೈತರ ಹರುಷ, ಮತ್ತೊಂದೆಡೆ ಆತಂಕ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಳೆದ ಕೆಲವು ದಿನಗಳಿಂದ ಸುಡುತ್ತಿರುವ ಬಿಸಿಲಿನಿಂದ ಕಂಗೆಟ್ಟಿದ್ದ ಮಲೆನಾಡಿಗರಿಗೆ ವರುಣ ದೇವ ತಂಪೆರೆದಿದ್ದಾನೆ. ಜಿಲ್ಲೆಯ ಕೊಟ್ಟಿಗೆಹಾರ, ಬಣಕಲ್, ಆಲ್ದೂರು ಹಾಗೂ ಮತ್ತಿಕಟ್ಟೆ ಭಾಗಗಳಲ್ಲಿ ಗುಡುಗು, ಸಿಡಿಲು ಸಹಿತ ಭಾರಿ ಮಳೆಯಾಗಿದ್ದು, ಜನಜೀವನ ಕೆಲಕಾಲ ಅಸ್ತವ್ಯಸ್ತಗೊಂಡಿದೆ.

ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಹವಾಮಾನ ವಿಚಿತ್ರವಾಗಿ ಬದಲಾಗುತ್ತಿದೆ. ಹಗಲಿನಲ್ಲಿ ತೀವ್ರವಾದ ಬಿಸಿಲು ಕಾಣಿಸಿಕೊಂಡರೆ, ಸಂಜೆಯಾಗುತ್ತಿದ್ದಂತೆ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಇದರಿಂದ ಭೂಮಿಯ ಧಗೆ ಹೆಚ್ಚಾಗಿದ್ದು, ಜನ ಸಾಮಾನ್ಯರು ಹೈರಾಣಾಗಿದ್ದಾರೆ. ಆದರೂ, ಮಳೆಯ ಆಗಮನದಿಂದ ವಾತಾವರಣದಲ್ಲಿ ತುಸು ತಂಪು ಮೂಡಿದೆ.

ಆಲ್ದೂರು ಪಟ್ಟಣದಲ್ಲಿ ಮಳೆ ಆರಂಭವಾಗುತ್ತಿದ್ದಂತೆ ವೃದ್ಧರೊಬ್ಬರು ತಡೆಯಲಾರದೆ ರಸ್ತೆಯ ಮಧ್ಯೆಯೇ ಮಳೆಯಲ್ಲಿ ನೆನೆಯುತ್ತಾ ಸಂಭ್ರಮದಿಂದ ಹೆಜ್ಜೆ ಹಾಕಿದ್ದಾರೆ. ಈ ದೃಶ್ಯ ನೋಡುಗರ ಗಮನ ಸೆಳೆದಿದ್ದು, ಮಳೆಯ ಸಂತೋಷಕ್ಕೆ ಸಾಕ್ಷಿಯಾಯಿತು.

ಅಡಿಕೆ ಮತ್ತು ಕಾಫಿ ತೋಟಗಳಿಗೆ ನೀರು ಹಾಯಿಸಲು ಕಷ್ಟಪಡುತ್ತಿದ್ದ ರೈತರಿಗೆ ಈ ಮಳೆ ವರದಾನವಾಗಿ ಪರಿಣಮಿಸಿದೆ.

ಆಲ್ದೂರು ಸಮೀಪದ ಅಡ್ಡಮಕ್ಕಿ ಗ್ರಾಮ ಸೇರಿದಂತೆ ಹಲವೆಡೆ ಭಾರಿ ಪ್ರಮಾಣದ ಆಲಿಕಲ್ಲು ಮಳೆಯಾಗಿದೆ. ಮಹಿಳೆಯರು ಆಲಿಕಲ್ಲುಗಳನ್ನು ಆಯ್ದು ಸಂಭ್ರಮಿಸಿದರಾದರೂ, ಬೆಳೆಗಾರರಲ್ಲಿ ಆತಂಕ ಮನೆ ಮಾಡಿದೆ. ಆಲಿಕಲ್ಲು ಮಳೆಯಿಂದ ಕಾಫಿ ಮೊಗ್ಗುಗಳು ಉದುರಿ ಬೆಳೆ ನಾಶವಾಗುವ ಭೀತಿ ಎದುರಾಗಿದೆ.

ಒಟ್ಟಾರೆಯಾಗಿ, ಕಾಫಿ ನಾಡಿನಲ್ಲಿ ವರುಣನ ಪ್ರವೇಶ ಒಂದೆಡೆ ಖುಷಿ ತಂದಿದ್ದರೆ, ಮತ್ತೊಂದೆಡೆ ಬೆಳೆ ಹಾನಿಯ ಭೀತಿಯನ್ನು ಮೂಡಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !