ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಲೆ ಏರಿಕೆಯ ಪರಿಣಾಮ ಉದ್ಯಾನ ನಗರಿ ಬೆಂಗಳೂರಿನಲ್ಲಿ ಬಿಸಿ ಬಿಸಿ ಫಿಲ್ಟರ್ ಕಾಫಿ ಕುಡಿಯುವ ಮೊದಲು ಜನರು ಒಮ್ಮೆ ಜೇಬು ಮುಟ್ಟಿ ನೋಡಿಕೊಳ್ಳುವ ಪರಿಸ್ಥಿತಿ ಎದುರಾಗಿದೆ.
ಹಾಲು ಹಾಗೂ ಕಾಫಿ ಪುಡಿ ಬೆಲೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ನಗರದ ಹೋಟಲ್ ಗಳು ಫಿಲ್ಟರ್ ಕಾಫಿಯ ದರಗಳನ್ನು ಪರಿಷ್ಕರಿಸಿದ್ದು, 3-5ರೂ ಹೆಚ್ಚಿವೆ. ಇದರಂತೆ ರೂ.15 ಬೆಲೆಯಿದ್ದ ಒಂದ್ ಕಪ್ ಕಾಫಿಯ ಬೆಲೆ ಇದೀಗ ರೂ.18ಕ್ಕೆ ಏರಿಕೆಯಾಗಿದೆ. ಕೆಲವೆಗೆ ರೂ.20-25ಕ್ಕೆ ಏರಿಕೆಯಾಗಿದೆ.
ಪ್ರಮುಖ ಉತ್ಪನ್ನಗಳ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಬೆಲೆ ಏರಿಕೆ ಮಾಡುವುದು ಬಿಟ್ಟರೆ ನಮಗೆ ಬೇರಾವುದೇ ದಾರಿಯಿಲ್ಲ ಎಂದು ಹೋಟೆಲ್ ಮಾಲೀಕರು ಹೇಳಿದ್ದಾರೆ.
ಕಾಫಿ ಪುಡಿಯ ಬೆಲೆ ಕಳೆದ ಮೂರು ತಿಂಗಳಿಗಿಂತ ತೀವ್ರವಾಗಿ ಏರಿಕೆಯಾಗಿದ್ದು, ಕೆಲ ಕಾಫಿ ಬೀಜಗಳು ಪ್ರತಿ ಕೆಜಿಗೆ 1,500 ರಿಂದ 2,000 ರೂ.ಗಳವರೆಗೆ ಹೆಚ್ಚಳವಾಗಿದೆ.
ಈ ಹಿಂದೆ ಕೆಜಿಗೆ 580 ರೂ. ಇದ್ದ ಅರೇಬಿಕಾದಂತಹ ಸಾಮಾನ್ಯವಾಗಿ ಬಳಸುವ ಬ್ರ್ಯಾಂಡ್‌ಗಳು ಕೂಡ ಇದೀಗ ಕೆಜಿಗೆ 730 ರೂ.ಗೆ ಏರಿಕೆಯಾಗಿದೆ. ಇದರ ಜೊತೆಗೆ, ಹಾಲಿನ ಬೆಲೆಗಳು ಕೂಡ ಲೀಟರ್‌ಗೆ 4 ರೂ.ಗಳಷ್ಟು ಏರಿಕೆಯಾಗಿವೆ ಮತ್ತು ವಿದ್ಯುತ್ ಬೆಲೆ ಕೂಡ ತೀವ್ರವಾಗಿ ಏರಿಕೆಯಾಗಿವೆ, ಇದು ನಮ್ಮ ಮೇಲಿನ ಹೊರೆಯನ್ನು ಹೆಚ್ಚಿಸುತ್ತಿದೆ ಎಂದು ಹೇಳಿದ್ದಾರೆ.