ಹೊಸದಿಗಂತ ವರದಿ,ಸೋಮವಾರಪೇಟೆ:
ಹವಾಮಾನ ವೈಪರೀತ್ಯ ಜನಜೀವನದ ಮೇಲೆ ಪರಿಣಾಮ ಬೀರುತಿದ್ದು, ಜನತೆ ಶೀತ ,ಜ್ವರದಿಂದ ಬಳಲುತ್ತಿದ್ದಾರೆ. ಖಾಸಗಿ ಕ್ಲಿನಿಕ್’ಗಳ ಮುಂದೆ ಚಿಕಿತ್ಸೆಗಾಗಿ ರೋಗಿಗಳ ಸಾಲೇ ಕಂಡುಬರುತ್ತಿದೆ.
ಒಂದೆಡೆ ಚಳಿಗಾಲ ಮತ್ತೊಂದೆಡೆ ಕೊರೋನಾ ಅಟ್ಟಹಾಸ ಇವೆರಡರ ನಡುವೆ ಜನತೆ ಹೈರಾಣರಾಗುತ್ತಿರುವುದು ವಾಸ್ತವ ಸ್ಥಿತಿ.
ಕೊರೆಯುವ ಚಳಿಯಲ್ಲಿ ಈಗ ಎಲ್ಲೆಲ್ಲೂ ಶೀತ,ನೆಗಡಿ,ಜ್ವರ ಕಾಣಿಸಿಕೊಂಡಿದ್ದು ಚಿಕಿತ್ಸೆಗಾಗಿ ರೋಗಿಗಳು ಪರದಾಡುವಂತಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಹಾಗೂ ಔಷಧಿ ಉಚಿತವಾಗಿ ಸಿಗುತ್ತದೆಯಾದರೂ ಇಲ್ಲಿಗೆ ಜ್ವರ ಅಂತ ಬಂದರೆ ಕೊರೋನಾ ಪರೀಕ್ಷೆ ಮಾಡಿಸುತ್ತಾರೆ, ಸೋಂಕು ಕಂಡುಬಂದರೆ ಆಸ್ಪತ್ರೆಯಲ್ಲಿರಬೇಕು, ಇಲ್ಲಾ ಗೃಹ ಸಂಪರ್ಕ ತಡೆಯಲ್ಲಿರಬೇಕು. ಇವುಗಳಿಗೆ ಹೆದರಿ ಒಂದಷ್ಟು ಮಂದಿ ಸರ್ಕಾರಿ ಆಸ್ಪತ್ರೆಯತ್ತ ತಲೆಯೇ ಹಾಕುತಿಲ್ಲಾ.
ಇದೀಗ ಕಾಫಿ ಕುಯ್ಲಿನ ಸಮಯವಾಗಿದ್ದು, ಅಕ್ಕಪಕ್ಕದ ತೋಟದ ಕೆಲಸಕ್ಕೆಂದು ಬಂದಿರುವ ಅಸ್ಸಾಮಿ (ಬಾಂಗ್ಲಾ ವಲಸಿಗರು) ಕಾರ್ಮಿಕರು ರೋಗಿಗಳಾಗುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಗೆ ಬಂದಾಗ ಕೋವಿಡ್ ಪರೀಕ್ಷೆ ಮಾಡಿಸಲು ಆಧಾರ್ ಇಲ್ಲದಿರುವುದರಿಂದ ಪರೀಕ್ಷೆ ನಡೆಸಲು ಹಿನ್ನಡೆಯಾಗುತ್ತಿದೆ.
ತಾಲೂಕು ಕೇಂದ್ರದ ಆಸ್ಪತ್ರೆಗೆ ದಿನನಿತ್ಯ ನೂರಾರು ಮಂದಿ ರೋಗಿಗಳು ಬರುತ್ತಿದ್ದು ,ಕೋವಿಡ್ ಸೇರಿದಂತೆ ಸಾಮಾನ್ಯ ರೋಗಿಗಳಿಗೂ ಇರುವ ವೈದ್ಯರೇ ಚಿಕಿತ್ಸೆ ನೀಡಬೇಕಾಗಿದೆ. ವೈದ್ಯರ ಕೊರತೆ ಇರುವ ಈ ಆಸ್ಪತ್ರೆಯಲ್ಲಿ ಇದೀಗ ಇರುವ ನುರಿತ ತಜ್ಞ ವೈದ್ಯರಿಬ್ಬರು ಕೋವಿಡ್ ಸೋಂಕು ತಗುಲಿ ಹಾಸಿಗೆ ಹಿಡಿದಿದ್ದಾರೆ. ಉಳಿದಿರುವ ಇಬ್ಬರು ವೈದ್ಯರು 700/800 ರೋಗಿಗಳನ್ನು ಪರೀಕ್ಷಿಸಬೇಕಾಗಿದೆ. ಇಲ್ಲಿ ದಿನವಿಡೀ ಕಾಯಬೇಕಲ್ಲಾ ಎಂದು ಹಲವು ರೋಗಿಗಳು ಖಾಸಗಿ ಕ್ಲಿನಿಕ್’ಗಳ ಮೊರೆಹೋಗುತ್ತಿದ್ದಾರೆ.
ಪಟ್ಟಣದಲ್ಲಿರುವ ಬೆರಳೆಣಿಕೆಯ ಕ್ಲಿನಿಕ್’ಗಳ ಮುಂದೆ ಸಾಲು-ಸಾಲು ರೋಗಿಗಳು ಮಾಸ್ಕ್ ಇಲ್ಲದೆ, ಸಾಮಾಜಿಕ ಅಂತರವಿಲ್ಲದೆ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಚಪ್ಪ, ಆರೋಗ್ಯ ನಿರೀಕ್ಷಕ ಜಾಸಿಂ ಖಾನ್ ಹಾಗೂ ಸಿಬ್ಬಂದಿಗಳು ಎಲ್ಲಾ ಕ್ಲಿನಿಕ್’ಗಳಿಗೆ ಭೇಟಿ ನೀಡಿ ರೋಗಿಗಳಿಗೆ ಅರಿವು ಮೂಡಿಸುವಲ್ಲಿ ಹರಸಾಹಸ ಪಡಬೇಕಾಯಿತು.