ಶೀಘ್ರವೇ ಸಂಪುಟ ಬದಲಾವಣೆಗೊಂಡು ಉಳಿದ ನಾಲ್ಕು ಸ್ಥಾನಗಳು ಭರ್ತಿ ಆಗುವ ನಿರೀಕ್ಷೆಯಿದೆ: ಯತ್ನಾಳ

ಹೊಸದಿಗಂತ ವರದಿ, ವಿಜಯಪುರ:

ದಿಗಂತ ವರದಿ ವಿಜಯಪುರ: ಶೀಘ್ರದಲ್ಲಿ ಸಚಿವ ಸಂಪುಟದಲ್ಲಿ ಬದಲಾವಣೆಗೊಂಡು, ಉಳಿದಿರುವ ನಾಲ್ಕು ಸ್ಥಾನಗಳು ಭರ್ತಿ ಆಗುವ ನಿರೀಕ್ಷೆಯಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈ ಸಲ ಯಾವುದೇ ಪರಿಸ್ಥಿತಿಯಲ್ಲಿ ವಿಜಯಪುರ ಜಿಲ್ಲೆಗೆ ಅನ್ಯಾಯ ಆಗುವುದಿಲ್ಲ ಎಂದರು.

ಯಾವುದು ಗುಪ್ತ ಸಭೆಗಳಿಲ್ಲ, ಎಲ್ಲವೂ ಪಕ್ಷದ ಬೆಳವಣಿಗೆಗೆ, 2023 ರ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಗೆಲ್ಲಬೇಕಿದೆ. ಸುಮಾರು 130 ಸೀಟ್ ಗೆಲ್ಲುವಷ್ಟು ಹಾಗೂ ಈಗಿರುವ 25 ಲೋಕಸಭಾ ಕ್ಷೇತ್ರ ಉಳಿಸಿಕೊಳ್ಳಬೇಕು ಎಂಬ ಕಾರಣಕ್ಕೆ ಸಭೆಗಳು ಆಗುತ್ತಿವೆ. ಇದರಲ್ಲಿ ಯಾವುದೂ ಪಕ್ಷ ವಿರೋಧಿ, ಹಿನ್ನೆಡೆ, ಪಕ್ಷಕ್ಕೆ ದ್ರೋಹ ಮಾಡುವಂತಹದ್ದು ಇಲ್ಲ ಎಂದರು.

ಉಮೇಶ ಕತ್ತಿ, ನಾನು, ರೇಣುಕಾಚಾರ್ಯ, ರಮೇಶ ಜಾರಕಿಹೊಳಿ ಅವರೆಲ್ಲ ಸೇರಿ ಮಾಡಿದ್ದು ಇದೇ ಸಭೆ. ಇವೆಲ್ಲ ಗುಪ್ತ ಸಭೆಗಳಲ್ಲ, ಬಹಿರಂಗ ಸಭೆಗಳು ಎಂದರು.

ಯಾರನ್ನೇ ಸಚಿವರನ್ನಾಗಿ ಮಾಡಿದರೂ ಕನಿಷ್ಠ ಒಂದು ಅಥವಾ ಒಂದೂವರೇ ವರ್ಷ ಅವಕಾಶ ಕೊಟ್ಟರೆ, ಯೋಜನೆಗಳನ್ನು ಜನರಿಗೆ ಮುಟ್ಟಿಸಲು ಅನುಕೂಲ ಆಗುವುದು. ಚುನಾವಣೆ ಕೇವಲ ಆರು ತಿಂಗಳು ಇದ್ದಾಗ ಸಚಿವ ಸಂಪುಟ ಬದಲಾವಣೆ ಮಾಡಿದರೆ ಇಲಾಖೆ ಬಗ್ಗೆ ಅಧ್ಯಯನ ಮಾಡುವುದರಲ್ಲೇ ಸಮಯ ಕಳೆಯುತ್ತೆ. ಚುನಾವಣೆ ಸಮೀಪ ಬಂದಾಗ ಅಧಿಕಾರಿಗಳ ದರ್ಪ‌ ನಡೆಯುತ್ತೆ ಎಂದರು.

ವಿಜಯಪುರ, ಯಾದಗಿರಿ, ಕಲಬುರಗಿ, ಮೈಸೂರು, ಚಾಮರಾಜನಗರ, ಕೊಡಗು ಸೇರಿದಂತೆ ಅನೇಕ ಜಿಲ್ಲೆಗಳು ಸಚಿವ ಸ್ಥಾನದಿಂದ ವಂಚನೆಗೊಂಡಿವೆ. ಅವುಗಳಿಗೆ ಸೂಕ್ತ ಸ್ಥಾನಮಾನ, ಜಾತಿ ಆಧಾರದ ಮೇಲೆ ಎಲ್ಲ ಜಾತಿಯವರಿಗೂ ಸೂಕ್ತ ಪ್ರಾತಿನಿಧ್ಯ ಕೊಡಬೇಕು ಎಂದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಒಳ್ಳೇ ಕೆಲಸ ಮಾಡಬೇಕು ಎನ್ನುವುದು ಬಿಟ್ಟರೆ, ಯಾವ ಶಾಸಕರು ಮಂತ್ರಿಯಾಗಬೇಕು ಎಂಬ ಲಾಬಿ ಇಲ್ಲ, ಬೊಮ್ಮಾಯಿ ವಿರುದ್ಧವೂ ಅಲ್ಲ, ಇವು ಪಕ್ಷದ ಹಿತದೃಷ್ಟಿಯಿಂದ ಆದಂತಹ ಸಭೆಗಳು ಎಂದರು.

ನಾಲ್ಕು ಸ್ಥಾನಗಳು ಖಾಲಿ‌ ಇವೆ, ಅವುಗಳನ್ನು ತುಂಬಬೇಕು, ಜಿಲ್ಲೆಗಳಿಗೆ ಅನ್ಯಾಯವಾಗಿದೆ. ಹೀಗೆ ಅನ್ಯಾಯವಾದರೆ ಆ ಜಿಲ್ಲೆಗಳಲ್ಲಿ ಶಾಸಕರನ್ನು ಆಯ್ಕೆ ಮಾಡಿದ ಜನರಿಗೆ ಅಪಮಾನ ಮಾಡಿದಂಗೆ. ನೀವು ಸಿಎಂ ಆಗಬೇಕಾದರೆ, ಹಲವು ಜಿಲ್ಲೆಗಳಿಂದ ನಾಲ್ಕು ಐದು ಶಾಸಕರನ್ನು ಕೊಟ್ಟಿದ್ದಾರೆ. ಒಂದೊಂದೆ ಜಿಲ್ಲೆಯಲ್ಲಿ ಎರಡು, ಮೂರು, ನಾಲ್ಕು, ಐದು, ಆರು, ಏಳು ಸಚಿವರನ್ನು ಮಾಡಿದ್ರೆ ಉಳಿದ ಶಾಸಕರಿಗೆ ಅರ್ಹತೆ ಇಲ್ಲವೇ ? ಅಥವಾ ಆ ಜಿಲ್ಲೆಯ ಜನರು ಬಿಜೆಪಿಗೆ ಓಟ್ ಹಾಕಿದ್ದೇ ತಪ್ಪಾ? ಅನ್ನುವ ಪ್ರಶ್ನೆ ಇವತ್ತು ಜನರಲ್ಲಿ ಮೂಡುತ್ತಿದೆ ಎಂದರು.

ಜಿಲ್ಲಾ ಪ್ರಾತಿನಿಧ್ಯ ಮೊದಲು ಕೊಡಿ, ಉಳಿದಂತೆ ಸೀನಿಯರ್ ಇದ್ದವರಿಗೆ ಹಾಗೂ ನಿಮ್ಮ ಹಿಂದಿನ ಬಾಲಂಗೋಚಿ ಇದ್ದವರಿಗೆ ಕೊಡಿ ಎಂದರು.

ನಿಗಮ ಮಂಡಳಿ ಅಧ್ಯಕ್ಷರ ಬದಲಾವಣೆ ವಿಚಾರ ಕುರಿತು ಪ್ರತಿಕ್ರಿಯಿಸಿ, ಬದಲಾವಣೆ ಮಾಡಬೇಕು, ಕೆಜೆಪಿ ಇಂದ ಬಂದಂತಹವರು ಹೆಚ್ಚು ಜನರು ಅಧ್ಯಕ್ಷರಾಗಿದ್ದಾರೆ. ಇವತ್ತು ಬಿಜೆಪಿ ಹಿರಿಯ ಹಾಗೂ ಮೂಲ‌ ಕಾರ್ಯಕರ್ತರು ಪಕ್ಷ ಕಟ್ಟಿದವರ ನಿರ್ಲಕ್ಷ್ಯ ಆಗಿದೆ. ಅಂಥವರಿಗೂ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಕೊಡಬೇಕು ಎಂದರು.

ಪಕ್ಷದಲ್ಲೂ ಅನೇಕ ಬದಲಾವಣೆಗಳು ಆಗಬೇಕು, ಪುನರ್ ರಚನೆ ಆಗಬೇಕು, ಹೊಸ ಚೈತನ್ಯದೊಂದಿಗೆ ಬಿಜೆಪಿ ಯುಗಾದಿ ವೇಳೆಗೆ ಸಜ್ಜಾಗಬೇಕು. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಸೆಡ್ಡು ಹೊಡೆದು ಬಿಜೆಪಿ ಕಟ್ಟಬೇಕು ಎಂಬುದೇ ನಮ್ಮೆಲ್ಲರ ಉದ್ದೇಶ ಎಂದರು.

ಬಿಜೆಪಿ, ಜೆಡಿಎಸ್ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ ಎಂದು ಸಿದ್ರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನು ಒಂದು ಬಾಂಬ್ ಸಿಡಿಸುತ್ತಿದ್ದೇನೆ. ಜೆಡಿಎಸ್, ಕಾಂಗ್ರೆಸ್ ನಲ್ಲಿರುವಂತಹ ಅನೇಕ ಶಾಸಕರು ಬೊಮ್ಮಾಯಿ ಹಾಗೂ ನಮ್ಮ ಸಂಪರ್ಕದಲ್ಲೂ ಇದ್ದಾರೆ. ಕೆಲವರು ಹೋಗುವವರು ಹೋಗ್ತಾರೆ, ಈ ಜಿಲ್ಲೆಯಲ್ಲೂ ಒಬ್ಬರು ಹೊಗೋಕೆ ಸಿದ್ಧವಾಗಿದ್ದಾರೆ. ಅವರು ಈಗಾಗಲೇ ಕಾಂಗ್ರೆಸ್ ನಾಯಕರೊಂದಿಗೆ ಗುಸುಗುಸು ಪಿಸುಪಿಸು ನಡೆಸಿದ್ದಾರೆ ಎಂದರು.

ಉಸ್ತುವಾರಿ ಸಚಿವರ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನು ಜೊಲ್ಲೆ ಅವರ ಬಗ್ಗೆ ಎಲ್ಲಿಯೂ ಏನೂ ಹೇಳಿಲ್ಲ, ಒಮ್ಮೆಯೂ‌ ನಾನು ಟೀಕೆ ಮಾಡಿಲ್ಲ. ಅವರು ಒಬ್ಬ ಹೆಣ್ಣು ಮಗಳಾಗಿ ಅವರ ಕೆಲಸ ಮಾಡಿದ್ದಾರೆ, ಅವರಿಗೆ ಹೊಸ ಜಿಲ್ಲೆ ಜವಾಬ್ದಾರಿ ಕೊಟ್ಟಿದ್ದಾರೆ. ಇಲ್ಲಿಯ ವರೆಗೆ ನಮ್ಮ ಜೊತೆ ಸಹಕಾರ ಮಾಡಿದ್ದಕ್ಕೆ ಅವರಿಗೆ ಜಿಲ್ಲೆಯ ಜನರ ಪರವಾಗಿ ಧನ್ಯವಾದ ಸಲ್ಲಿಸುತ್ತೇನೆ ಎಂದರು.

ಉಮೇಶ ಕತ್ತಿ ಅವರು ನಮ್ಮ ಜಿಲ್ಲೆಗೆ ಉಸ್ತುವಾರಿ ಆಗಿದ್ದಾರೆ. ಅವರು ನಮ್ಮ ಆತ್ಮೀಯರು, ಹಿರಿಯರು, ಅವರು ನಮ್ಮ ಜಿಲ್ಲೆಗೆ ಉಸ್ತುವಾರಿ ಆಗಿದ್ದು ಸಂತೋಷದ ವಿಚಾರ ಎಂದರು.

ಸಮ್ಮಿಶ್ರ ಸರ್ಕಾರ ಕೆಡುವಲು ನಾವು ಯತ್ನಾಳ ಅವರು ಬಹಳ ಶ್ರಮಿಸಿದ್ದೇವೆ, ನಮಗೆ ಸೂಕ್ತ ಸ್ಥಾನಮಾನ ಕೊಟ್ಟಿಲ್ಲ ಎಂದು ರೇಣುಕಾಚಾರ್ಯ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿ, ರೇಣುಕಾಚಾರ್ಯ ಏನು ಮಾಡಿದ್ದಾರೋ, ನಾವು ಏನು ಮಾಡಿದ್ದೀವೋ ಹೇಳಿಕೊಳ್ಳುವುದು ಬೇಡ. ಒಟ್ಟಾರೆಯಾಗಿ ಈ ಸರ್ಕಾರ ಬರಲು ಬಹಳಷ್ಟು ಜನರು ಬಿಜೆಪಿಯಲ್ಲಿ ಶ್ರಮಿಸಿದ್ದಾರೆ, ಅಂತಹವರು ಕೆಲವರು ವಂಚಿತರಾಗಿದ್ದಾರೆ ಎಂದರು.

ನಮ್ಮಲ್ಲಿ ಕೆಲವರಲ್ಲಿ ಅಡ್ಜಸ್ಟ್ ಮೆಂಟ್ ಇವೆ, ಡಿಕೆಶಿ, ಸಿದ್ದರಾಮಯ್ಯ, ಕುಮಾರಸ್ವಾಮಿ ಜೊತೆ ಅಡ್ಜೆಸ್ಟ್ ಮೆಂಟ್ ಇರುವ ಲೀಡರ್ ಗಳು ಇದ್ದಾರೆ. ಓನ್ಲಿ ಅಡ್ಜೆಸ್ಟ್ ಮೆಂಟ್ ಲೀಡರ್ ಗಳು ಅಂತ್ಯವಾಗಿದ್ದಾರೆ, ಈಗ ಸಜಿಷನ್ ಕೊಡುವ ಲೀಡರ್ಸ್ ಅಷ್ಟೆ ಉಳಿದಿದ್ದಾರೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!