ಹೊಸದಿಗಂತ ವರದಿ ಮಡಿಕೇರಿ:
ದ್ವಿಚಕ್ರ ವಾಹನಗಳೆರಡರ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಬ್ಯಾಂಕ್ ಉದ್ಯೋಗಿಯೊಬ್ಬರು ಮೃತಪಟ್ಟ ಘಟನೆ ನಡೆದಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೃತರನ್ನು ಕೆನರಾ ಬ್ಯಾಂಕ್’ನ ಅಮ್ಮತ್ತಿ ಶಾಖೆಯ ಉದ್ಯೋಗಿ, ಮೂಲತಃ ಕೇರಳದ ತ್ರಿಶೂರು ಜಿಲ್ಲೆಯವರಾದ ಅಮೃತಾ (24) ಎಂದು ಗುರುತಿಸಲಾಗಿದೆ.
ಶುಕ್ರವಾರ ಸಂಜೆ ವೀರಾಜಪೇಟೆ-ಅಮ್ಮತ್ತಿ ರಸ್ತೆಯ ಸುಂಕದಕಟ್ಟೆ ಬಳಿ ಅಮೃತಾ ಅವರು ಚಾಲಿಸುತ್ತಿದ್ದ ಸ್ಕೂಟರ್ ಹಾಗೂ ಬಿಳಗುಂದ ಗ್ರಾಮದ ವಿಠಲ (22)ಎಂಬವರು ಚಾಲಿಸುತ್ತಿದ್ದ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿತ್ತು.
ಈ ಸಂದರ್ಭ ಸವಾರರಿಬ್ಬರ ತಲೆಗೂ ಗಂಭೀರ ಸ್ವರೂಪದ ಗಾಯಗಳಾಗಿದ್ದವು. ವೀರಾಜಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಇಬ್ಬರಿಗೂ ಪ್ರಥಮ ಚಿಕಿತ್ಸೆ ನೀಡಲಾಯಿತಾದರೂ,ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅಮೃತಾ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ಹಾಗೂ ಗಂಭೀರ ಗಾಯಗಳಿದ್ದ ವಿಠಲ ಅವರನ್ನು ಮಂಗಳೂರಿನ ಆಸ್ಪತ್ರೆಗೂ ದಾಖಲಿಸಲಾಗಿತ್ತು.
ಆದರೆ ಚಿಕಿತ್ಸೆಗೆ ಸ್ಪಂದಿಸದ ಅಮೃತಾ ಅವರು ಶುಕ್ರವಾರ ರಾತ್ರಿ 10.40ರ ಸುಮಾರಿಗೆ ಸಾವಿಗೀಡಾಗಿದ್ದಾರೆ.
ಮೂಲತಃ ಕೇರಳದವರಾದ ಅಮೃತಾ ಕಳೆದ ಒಂದು ವರ್ಷದಿಂದ ಅಮ್ಮತ್ತಿಯ ಕೆನರಾ ಬ್ಯಾಂಕ್ ಶಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ವೀರಾಜಪೇಟೆಯ ಅಪಾರ್ಟ್‌ಮೆಂಟ್ ಒಂದರಲ್ಲಿ ವಾಸವಿದ್ದು, ಪ್ರತಿನಿತ್ಯ ತಮ್ಮ ದ್ವಿಚಕ್ರವಾಹನದಲ್ಲಿ ಕರ್ತವ್ಯಕ್ಕೆ ಹೋಗಿ ಬರುತ್ತಿದ್ದರು ಎನ್ನಲಾಗಿದೆ. ವೀರಾಜಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.