ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಭಿಕ್ಷೆ ಬೇಡುವವನಂತೆ ಬಂದ ವ್ಯಕ್ತಿಯೊಬ್ಬ ಚಾಕುವಿನಿಂದ ಹಲ್ಲೆ ನಡೆಸಿದ್ದರಿಂದ ಆಂಧ್ರಪ್ರದೇಶದಲ್ಲಿನ ಪ್ರತಿಪಕ್ಷ ತೆಲುಗು ದೇಶಂ ಪಕ್ಷದ (ಟಿಡಿಪಿ) ನಾಯಕ . ಶೇಷಗಿರಿರಾವ್ ಗಂಭೀರ ಗಾಯಗೊಂಡಿದ್ದಾರೆ. ಕಾಕಿನಾಡ ಜಿಲ್ಲೆಯ ತುನಿಯಲ್ಲಿ ಗುರುವಾರ ಈ ಘಟನೆ ನಡೆದಿದೆ.
ಹಲ್ಲೆಯಿಂದ ಟಿಡಿಪಿ ಮುಖಂಡ ಪಿ. ಶೇಷಗಿರಿರಾವ್ ಅವರ ತಲೆ ಮತ್ತು ಕೈಗಳಿಗೆ ಗಂಭೀರ ಗಾಯಗಳಾಗಿವೆ. ರಾವ್ ಅವರ ಕೂಗು ಕೇಳಿ ಕುಟುಂಬಸ್ಥರು ಹೊರಗೆ ಧಾವಿಸಿದಾಗ, ದಾಳಿಕೋರ ಮೋಟರ್ ಬೈಕ್‌ನಲ್ಲಿ ಪರಾರಿಯಾಗಿದ್ದಾನೆ. ಪಿ. ಶೇಷಗಿರಿರಾವ್ ಅವರನ್ನು ತುನಿಯ ಕಾರ್ಪೊರೇಟ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶೇಷಗಿರಿ ರಾವ್ ಅವರ ಮೇಲಿನ ಹಲ್ಲೆಗೆ ರಸ್ತೆ ಮತ್ತು ಕಟ್ಟಡ ಇಲಾಖೆ ಸಚಿವ ದಾಡಿಸೆಟ್ಟಿ ರಾಜಾ ಅವರ ಬೆಂಬಲಿಗರೇ ಕಾರಣ ಎಂದು ಟಿಡಿಪಿ ಆರೋಪಿಸಿದೆ. ರಾವ್ ಹತ್ಯೆ ಯತ್ನವನ್ನು ಟಿಡಿಪಿಯ ಆಂಧ್ರಪ್ರದೇಶ ಘಟಕದ ಅಧ್ಯಕ್ಷ ಕೆ. ಆಚನ್ನಾಯ್ಡು ಖಂಡಿಸಿದ್ದಾರೆ.
ಟಿಡಿಪಿ ಮುಖಂಡರು ಹಾಗೂ ಮಾಜಿ ಸಚಿವ ಯನಮಲ ರಾಮಕೃಷ್ಣುಡು ಮತ್ತು ಚಿನ್ನ ರಾಜಪ್ಪ ಆಸ್ಪತ್ರೆಗೆ ಭೇಟಿ ನೀಡಿ ರಾವ್ ಅವರನ್ನು ಭೇಟಿ ಮಾಡಿದರು.